ಮೂಡುಬಿದಿರೆ: ನಮ್ಮ ಸುತ್ತಮುತ್ತಲಿನ ಸಮಸ್ಯೆಯನ್ನು ನೋಡಿ ಇನ್ನೊಬ್ಬರನ್ನು ದೂಷಿಸುವ ಮೊದಲು, ಆ ಸಮಸ್ಯಗೆ ನನ್ನಿಂದ ಹೇಗೆ ಪರಿಹಾರ ಸಾಧ್ಯ ಹಾಗೂ ಆ ಸಮಸ್ಯೆಯನ್ನು ಬಗೆಹರಿಸಲು ಇರುವ ಪರಿಹಾರ ಮಾರ್ಗಗಳನ್ನು ಯೋಚಿಸುವಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಉಡುಪಿ ಮಾನವ ಹಕ್ಕು ರಕ್ಷಣಾ ಪ್ರತಿಷ್ಟಾನದ ಅಧ್ಯಕ್ಷ ಡಾ. ರವೀಂದ್ರ ಶಾನುಭಾಗ್ ತಿಳಿಸಿದರು.

ಆಳ್ವಾಸ್ ಕಾಲೇಜ್‍ನ ಕುವೆಂಪು ಸಭಾಂಗಣದಲ್ಲಿ ಮಾನವ ಹಕ್ಕುಗಳ ವೇದಿಕೆ ಮತ್ತು ಕಾಲೇಜಿನ ರಾಜಕೀಯ ಶಾಸ್ತ್ರ ವಿಭಾಗದ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ “ದೈನಂದಿನ ದಿನಗಳಲ್ಲಿ ಮಾನವ ಹಕ್ಕು” ಎಂಬ ವಿಷಯದ ಕುರಿತು ಇವರು ಮಾತನಾಡಿದರು.
ದುರಾದೃಷ್ಟವಾಶತ್ ನಾವಿಂದು ಇನ್ನೊಬ್ಬರನ್ನು ಟೀಕಿಸುವ, ಸಮಸ್ಯೆಯನ್ನು ಉಲ್ಬಣಗೊಳಿಸುವ, ಇನ್ನೊಬ್ಬರ ಕಷ್ಟ ತನಗೆ ಸಂಬಂಧವೇ ಇಲ್ಲ ಎನ್ನುವ ಮನೋಭಾವ ನಮ್ಮೆಲ್ಲ ಸಮಸ್ಯೆಗೆ ಮೂಲಕಾರಣವಾಗಿದೆ. ಪ್ರತಿಯೊಬ್ಬ ಪ್ರಜೆ, ಅಧಿಕಾರಿ, ರಾಜಕೀಯ ಧುರೀಣ ತನ್ನ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಿದರೆ, ಗೊಂದಲಗಳಿಗೆ ಅವಕಾಶವೇ ಇಲ್ಲ. ಇಂದಿನ ಯುವಜನತೆಯಲ್ಲಿ ರಾಜಕೀಯವಾಗಿ ಜಾಗೃತರಾಗಿರಬೇಕೇ ಹೊರತು, ಯಾವುದೇ ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳವ ಕೆಲಸದಲ್ಲಲ್ಲ ಎಂದು ಹೇಳಿದರು.
ಸಮಾಜದಲ್ಲಿನ ದುರ್ಬಲ ವರ್ಗಗಳ, ಶೋಷಿತರ, ನಿರ್ಗತಿಕರ, ವೃದ್ದರ ಏಳಿಗೆಗಾಗಿ ಉಡುಪಿ ಮಾನವ ಹಕ್ಕು ರಕ್ಷಣಾ ಪ್ರತಿಷ್ಟಾನ ಯಾವುದೇ ಪ್ರತಿಫಲಾಪೆಕ್ಷೆ ಇಲ್ಲದೆ ಶ್ರಮಿಸುತ್ತಿದೆ. ಕಳೆದ ನಾಲ್ಕು ದಶಕಗಳಲ್ಲಿ ಸುಮಾರು 41000 ಕ್ಕೂ ಹೆಚ್ಚಿನ ಪ್ರಕರಣಗಳನ್ನು ತೆಗೆದುಕೊಂಡು, ಅವುಗಳಲ್ಲಿ ಶೇಕಡಾ 70 ಪ್ರಕರಣಗಳಿಗೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿದೆ ಎಂದರು.
ಮೂವತ್ತನಾಲ್ಕು ವರ್ಷಗಳಿಂದ ಕೇವಲ ಹದಿನೈದು ರೂಪಾಯಿ ವೇತನವನ್ನು ಪಡೆಯುತ್ತಿದ್ದ ಅಕ್ಕು ಮತ್ತು ಲೀಲಾರ ಪ್ರಕರಣ, ಚೇರ್ಕಾಡಿ ಪೌಢಶಾಲೆಯಲ್ಲಿ ಉದ್ಯೋಗಗಿಟ್ಟಿಸಿಕೊಂಡ ಜಾನಕಿ ಪ್ರಕರಣ, ಶಂಬು ಪೂಜಾರಿ ಪ್ರಕರಣ, ಕೃಷ್ಣ ಪೂಜಾರಿ ಪ್ರಕರಣ, ಸೋನಿಯಾ ಪ್ರಕರಣಗಳನ್ನು ವಿವರಿಸಿ, ನ್ಯಾಯ ಒದಗಿಸಿಕೊಟ್ಟ ಪರಿಯನ್ನು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಕಲಾ ವಿಭಾಗದ ಮುಖ್ಯಸ್ಥೆ ಸಂಧ್ಯಾ ಕೆ ಎಸ್ ‘’ಇಂದಿನ ಯುವ ಜನತೆ ಸಕ್ರಿಯವಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ, ದೇಶದ ಶಕ್ತಿಯಾಗಿ ಮಾರ್ಪಾಡುಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ರಾಜಕೀಯ ಶಾಸ್ತ್ರದ ಮುಖ್ಯಸ್ಥ ರಮೇಶ್ ಬಿ, ಮಾನವ ಹಕ್ಕು ವೇದಿಕೆಯ ಸಂಯೋಜಕರಾದ ನಾಗರಾಜ್ ಮತ್ತು ಜಯಶ್ರೀ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪವಿತ್ರ ತೇಜ್ ಉಪಸ್ಥಿತರಿದ್ದರು. ಸ್ಪಂದನ್ ರೈ ಸ್ವಾಗತಿಸಿ, ಸುಮಯ್ಯ ಕಾರ್ಯಕ್ರಮ ನಿರ್ವಹಿಸಿದರು.

