ಬದಿಯಡ್ಕ: ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಗಳ 58ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯ ಪ್ರಯುಕ್ತ ಶ್ರೀಮದ್ ಎಡನೀರು ಮಠದ ಸಭಾಂಗಣದಲ್ಲಿ ನಡಯುತ್ತಿರುವ ಚಾತುರ್ಮಾಸ್ಯ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಗುರುವಾರ ಸಂಜೆ ಕಾಸರಗೋಡಿನ ವಿದುಷಿಃ ಉಷಾ ಈಶ್ವರ ಭಟ್ ಅವರಿಂದ ಶಾಸ್ತ್ರೀಯ ಸಂಗೀತ ಕಚೇರಿ ಜರುಗಿತು.
ಈ ಸಂಗೀತ ಕಚೇರಿ ಪಕ್ಕವಾದ್ಯದಲ್ಲಿ ಗಣರಾಜ ಕಾರ್ಲೆ (ವಯಲಿನ್), ಡಾ| ವಿ.ಆರ್.ನಾರಾಯಣ ಪ್ರಕಾಶ್ ಕೋಯಿಕ್ಕೋಡ್ (ಮೃದಂಗ) ಈಶ್ವರ ಭಟ್ (ಘಟಂ) ಹಾಗೂ ರಾಜೀವ್‍ಗೋಪಾಲ್ (ಮೌತ್ ಓರ್ಗನ್) ಸಹಭಾಗಿತ್ವದಲ್ಲಿ ನಡೆಯಿತು. ಇದಕ್ಕೂ ಮೊದಲು ಚಾತುರ್ಮಾಸ್ಯದ ಅಂಗವಾಗಿ ಬದಿಯಡ್ಕ ಪೇಟೆಯ ಭಕ್ತಾದಿಗಳಿಂದ ಶ್ರೀಮಠಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಆಗಮಿಸಿತು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಕೇಶವಾನಂದ ಭಾರತೀ ಶ್ರೀಗಳು, ಶ್ರೀದೇವರಿಗೆ ಸಮರ್ಪಿಸುವ ಹೊರೆ ಕಾಣಿಕೆ ಎಂಬ ಪರಿಕಲ್ಪನೆಯು ವಿಶಾಲ ಅರ್ಥಹೊಂದಿದ್ದು, ಬದುಕಿನ ಜಂಜಡಗಳಿಂದ ನಮ್ಮಲ್ಲುಂಟಾಗುವ ಕ್ಲೇಶಗಳ ಹೊರೆಯನ್ನು ಭಗವಂತನ ಸನ್ನಿಧಿಯಲ್ಲಿ ಇಳಿಸಿ ದುಖಃದಿಂದ ಪಾರಾಗುವುದು ಮತ್ತು ನಮ್ಮ ಅಗತ್ಯದ ವಸ್ತುಗಳಲ್ಲಿ ಒಂದಷ್ಟನ್ನು ಪರರಿಗೂ ಮೀಸಲಿಟ್ಟು ಬದುಕಿನ ಸಾರ್ಥಕತೆಯನ್ನು ಪಡೆಯುವುದು ಆಗಿದೆ ಎಂದು ತಿಳಿಸಿದರು. ಭಕ್ತಿ, ಶ್ರದ್ದೆ ಮತ್ತು ಭಗವದ್ ನಾಮ ಸಂಕೀರ್ತನೆಯ ನಿತ್ಯಾನುಷ್ಠಾನ ಪ್ರತಿಯೊಬ್ಬರ ಹೃದಯದಲ್ಲಿ ಹುಟ್ಟಿ ಬೆಳೆಯಲಿ ಎಂದು ಶ್ರೀಗಳು ಆಶೀರ್ವಚನಗೈದು ಹಾರೈಸಿದರು.
ಚಾತುರ್ಮಾಸ್ಯ ಸಮಿತಿ ಕಾರ್ಯಾಧ್ಯಕ್ಷ ಡಾ| ಬಿ.ಎಸ್.ರಾವ್, ಪ್ರಧಾನ ಕಾರ್ಯದರ್ಶಿ ಕೆಯ್ಯೂರು ನಾರಾಯಣ ಭಟ್, ಜಯರಾಮ ಮಂಜತ್ತಾಯ ಎಡನೀರು, ಅರವಿಂದಕುಮಾರ ಅಲೆವೂರಾಯ, ಸೀತಾರಾಮ ಕುಂಜತ್ತಾಯ, ಚೇತನ್ ಕುಣಿಕುಳ್ಳಾಯ, ಅಶೋಕ ಪುಣಿಚಿತ್ತಾಯ, ಡಾ.ಗೋಪಾಲಕೃಷ್ಣ ಭಟ್ ಎರುಗಲ್ಲು, ನ್ಯಾಯವಾದಿ ನಾರಾಯಣ ಭಟ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು. ದಿನದ ವಿಶೇಷತೆಯಾಗಿ ಪ್ರದೋಷ ಸೇವೆಗಳು ನೆರವೇರಿದವು.
ಶನಿವಾರ ಸಂಜೆ 6.30 ರಿಂದ 8.00 ವರೆಗೆ ಮಂಗಳೂರಿನ ಪ್ರಸಿದ್ಧ ಭರತನಾಟ್ಯ ಕಲಾವಿದರಾದ ಅರ್ಥಾ ಪೆರ್ಲ ಮತ್ತು ಅಯನಾ ಪೆರ್ಲ ಅವರಿಂದ ವಿಶೇಷ ಭರತನಾಟ್ಯ ಪ್ರದರ್ಶನ ಜರಗಲಿದೆ. ಬಳಿಕ 9.00 ಗಂಟೆಯವರೆಗೆ ಅಂತರಾಷ್ಟ್ರೀಯ ಖ್ಯಾತಿಯ ಕಾಸರಗೋಡಿನ ಶ್ರೀಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ತಂಡದವರಿಂದ ಕೆ.ವಿ.ರಮೇಶ್ ನಿರ್ದೇಶನದಲ್ಲಿ ನರಕಾಸುರ ವಧೆ-ಗರುಡ ಗರ್ವಭಂಗ ಬೊಂಬೆಯಾಟ ಪ್ರದರ್ಶನ ನಡೆಯಲಿದೆ.




