ಮೂಡುಬಿದಿರೆ: ತ್ರಿಭುವನ್ ಜೇಸಿಸ್‍ನ ಜೇಸಿರೆಟ್ ವಿಭಾಗವು ಏರ್ಪಡಿಸಿದ “ಆಟಿದ ಗೌಜಿ ಗಮ್ಮತ್ತು” ಕಾರ್ಯಕ್ರಮವು ಸಮಾಜ ಮಂದಿರದಲ್ಲಿ ಆ.7 ಮಂಗಳವಾರದಂದು ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾದ ವಲಯ ರೈತ ಸಂಘದ ಅಧ್ಯಕ್ಷ ಎಸ್ ಧನಕೀರ್ತಿ ಬಲಿಪ ಮಾತನಾಡಿ, ತುಳುನಾಡು ವಿಶಿಷ್ಠ ಕಲೆ. ಸಂಸ್ಕøತಿ, ಆಚರಣೆ, ಆರಾಧನಾ ಪದ್ಧತಿಯನ್ನು ಹೊಂದಿದ ಭೌಗೋಳಿಕ ಪ್ರದೇಶವಾಗಿದೆ. ಭೂತಾರಾಧನೆ, ನಾಗಾರಾಧನೆ, ಯಕ್ಷಾರಾಧನೆಯಂತಹ ಜನಪದ ಕಲಾ ಪ್ರಕಾರಗಳನ್ನು ಹೊಂದಿದೆ. ಇಲ್ಲಿ ಅಡಗಿರುವ ಸಂಸ್ಕøತಿ, ಕಲೆ, ಸಾಹಿತ್ಯ ನಶಿಸಿ ಹೋಗುವ ಅಪಾಯವಿದ್ದು ದಾಖಲೀಕರಣದ ಕೆಲಸವಾಗಬೇಕು ಎಂದು ಹೇಳಿದರು.
ಆಟಿ ಆಚರಣೆಯ ಮೂಲಕ ನಮ್ಮ ಹಿರಿಯರು ಹೇಗೆ ಜೀವನ ನಡೆಸುತ್ತಿದ್ದರು. ಅಂದಿನ ಬದುಕಿನ ಸ್ಥಿತಿಗತಿ ಹೇಗಿತ್ತು ಎಂಬುದನ್ನು ಇಂದಿನ ಪೀಳಿಗೆ ತಿಳಿಯಲು ಸಹಕಾರಿಯಾಗಿದೆ. ನಮ್ಮ ಕೃಷಿ ಬದುಕು. ಕೌಟುಂಬಿಕ ಬದುಕು, ಆರಾಧನಾ ಕ್ರಮಗಳನ್ನು ತಿಳಿ ಹೇಳುವ ಕೆಲಸ ಹಿರಿಯರಿಂದಾಗಬೇಕು. ಭತ್ತದ ಗದ್ದೆಗಳು ಕಣ್ಮರೆಯಾಗಿ ಕಾಂಕ್ರೀಟ್ ಕಟ್ಟಡಗಳು ತಲೆಯೆತ್ತುತಿದ್ದರೆ ಗುಡಿ ಕೈಗಾರಿಕೆಗಳು ಮಾಯವಾಗಿ ಕಾರ್ಪೋರೇಟ್ ಕಂಪೆನಿಗಳು ಕಾಲಿಡುತ್ತಿರುವುದರಿಂದ ಇಲ್ಲಿನ ಸಂಸ್ಕøತಿ ನಾಶವಾಗಲು ಕಾರಣವಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಜೇಸಿರೆಟ್ ಅಧ್ಯಕ್ಷೆ ಶಾಂತಲಾ ಎಸ್ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಆಧುನಿಕತೆಯ ಭರಾಟೆಯಲ್ಲಿ ತುಳು ಸಂಸ್ಕøತಿ, ಸಂಪ್ರದಾಯಗಳು ಮರೆಯಾಗುತ್ತಿರುವುದರಿಂದ ಯುವ ಪೀಳಿಗೆಗೆ ಇದನ್ನು ಪರಿಚಯಿಸುವ ನಿಟ್ಟಿನಲ್ಲಿ ಆಟಿ ಆಚರಣೆಯಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದರು.
ತ್ರಿಭುವನ್ ಜೇಸಿಸ್ ಅಧ್ಯಕ್ಷೆ ಸಂಗೀತ ಪ್ರಭು ಬಹುಮಾನ ವಿಜೇತರ ವಿವರ ನೀಡಿದರು.
ಈ ಸಂದರ್ಭಲ್ಲಿ ಜೇಸಿರೆಟ್ ಸಂಯೋಜಕ ವಿನಯಚಂದ್ರ ಜ್ಯೂನಿಯರ್ ಜೇಸಿ ಅಧ್ಯಕ್ಷ ಶಶಾಂಕ್, ಜೇಸಿಸ್ ಕಾರ್ಯದರ್ಶಿ ರಾಮಕೃಷ್ಣ ಉಪಸ್ಥಿತರಿದ್ದರು. ದೀಪ್ತಿ ಪ್ರವೀಣ್ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು, ಆಟಿ ತಿಂಡಿ ತಿನಿಸುಗಳ ಪ್ರದರ್ಶನ ನಡೆಯಿತು.

