ಮೂಡಬಿದಿರೆ: “ನಿರ್ದಿಷ್ಟವಾದ ಕನಸು, ಅದನ್ನು ನನಸಾಗಿಸಲು ಸರಿಯಾದ ಯೋಜನೆ ಮತ್ತು ಆ ಯೋಜನೆಯ ಸಾಕಾರತೆಗೊಂದು ತಂಡ. ಈ ಮೂರು ಅಂಶಗಳನ್ನು ಸೂಕ್ತ ರೀತಿಯಲ್ಲಿ ರೂಢಿಸಿಕೊಂಡಲ್ಲಿ ಯಶಸ್ಸು ಖಚಿತ” ಎಂದು ಕಣ್ಣೂರು ರಾಷ್ಟ್ರೀಯ ನೌಕಾ ದಳದ ಕೊಮಾರೇಟ್ ಬೆನ್ ಎಚ್. ಬರ್ಸನ್ ತಿಳಿಸಿದರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಎಂಬಿಎ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಥಮ ವರ್ಷ ಬಿಇ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
“ಈ ರೀತಿ ಜೀವನದಲ್ಲಿ ಯಶಸ್ಸು ಸಾಧಿಸಲು ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣವನ್ನು ಕಲ್ಪಿಸಿಕೊಡುತ್ತಿದೆ. ಇಡೀ ಜಗತ್ತು ಎಲ್ಲಾ ಸಮಸ್ಯೆಗಳನ್ನು ನಿವಾರಿಸುವ ವ್ಯಕ್ತಿಗಾಗಿ ಎದುರು ನೋಡುತ್ತಿದೆ. ಇಂಥಹ ಜವಾಬ್ದಾರಿಯುತ ಪ್ರಜೆ ಯಾಗಿರೂಪಿಸುವಲ್ಲಿ ಈ ಶಿಕ್ಷಣ ಸಂಸ್ಥೆ ಸಹಕಾರಿಯಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
“ಕನಸುಗಳನ್ನು ಕಣ್ಣು ಮುಚ್ಚಿ ಕಾಣುವ ಬದಲು ಕಣ್ಣು ತೆರೆದು ಕಾಣುವಂತಾಗಬೇಕು. ಆದರೆ ಕೆಲವರು ಕನಸು ಕಾಣುವುದರಲ್ಲೇ ನಿಂತುಬಿಡುತ್ತಾರೆ. ಆ ರೀತಿಯ ಸ್ಥಿತಿ ನಿಮ್ಮದಾಗಬಾರದು. ಗುರಿ ತಲುಪುವ ಹಾದಿಯಲ್ಲಿ, ಯಾವುದೇ ಅಡೆತಡೆಗಳಿಗೆ ಕುಗ್ಗದೇ, ಸ್ವ-ನಂಬಿಕೆಯೊಂದಿಗೆ ನಿರಂತರವಾಗಿ ಸಾಗಬೇಕು” ಎಂದು ಕಿವಿಮಾತು ಹೇಳಿದರು.
ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳಿಂದಲೇ ಈ ಸಂಸ್ಥೆ ಇಷ್ಟು ಸದೃಢವಾಗಿ ಬೆಳೆಯಲು ಸಾಧ್ಯವಾಗಿದೆ. ಇಲ್ಲಿ ವ್ಯಾಸಂಗ ಮಾಡುವ ಮಕ್ಕಳೇ ಈ ಪ್ರತಿಷ್ಠಾನದ ರಾಯಭಾರಿಗಳು. ಹಾಗಾಗಿ ನೀವೇ ಇದರ ಆಧಾರ ಸ್ತಂಭ. ಇಂಜಿನಿಯರ್ ಆಗಬೇಕೆಂಬ ಕನಸು ಹೊತ್ತು ಬಂದಿರುವ ಕಾರಣಕ್ಕೆ, ನಿಮ್ಮನ್ನು ಕೇವಲ ಶೈಕ್ಷಣಿಕವಾಗಿ ಸೀಮಿತಗೊಳಿಸದೇ, ಅದರ ಹೊರತಾಗಿ ಇತರ ಚಟುವಟಿಕೆಗಳಲ್ಲಿ ಭಾಗವಹಿಸಿ. ನಿಮ್ಮನ್ನು ಸದಾ ಕ್ರಯಾಶೀಲರಾಗಿಸಿಕೊಳ್ಳುವುದು ಅಗತ್ಯ. ನೀವು ಈಗ ಇರುವ ಸ್ಥಾನ ಕೇವಲ ನಿಮ್ಮ ಪರಿಶ್ರಮವಲ್ಲ. ಅದು ನಿಮ್ಮ ಪೋಷಕರ ನಿರಂತರ ಶ್ರಮ ಮತ್ತು ಕನಸು ಕೂಡ. ಹಾಗಾಗಿ ಇತರರ ಕೊಂಕು ಮಾತಿಗೆಕಿವಿಗೊಡದೇ, ನಿಮ್ಮಲ್ಲಿರುವ ಸಾಮಥ್ರ್ಯ ಸಾಬೀತುಪಡಿಸಿ, ನಿಮ್ಮಗುರಿತಲುಪಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಳ್ವಾಸ್ ಇಂಜಿನಿಯರಿಂಗ್‍ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫರ್ನಾಂಡೀಸ್ ಶೈಕ್ಷಣಿಕ ವರದಿ ಮಂಡಿಸಿದರು. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ವಿವಿಧ ವಿಭಾಗಗಳ ಡೀನ್‍ಗಳು ಹಾಗೂ ಮುಖ್ಯಸ್ಥರು ಉಪಸ್ಥಿತರಿದ್ದರು.




