ಮೂಡುಬಿದಿರೆ: ಕರಿಂಜೆ ಗ್ರಾಮದ ಕೃಷಿಕ ರವಿ ಗುರ್ಬೆಟ್ಟು ಅವರು ಉಳುಮೆ ಮಾಡಿದ ಗದ್ದೆಯಲ್ಲಿ ಎಂ.ಕೆ ಶೆಟ್ಟಿ ಸೆಂಟ್ರಲ್ ಸ್ಕೂಲ್‍ನ ವಿದ್ಯಾರ್ಥಿಗಳಿಂದ ‘ಕೆಸರುಡೊಂಜಿ ದಿನ’ ಕಾರ್ಯಕ್ರಮ ಆ.6 ಸೋಮವಾರದಂದು ನಡೆಯಿತು.
ತರಗತಿಯಲ್ಲಿ ಕುಳಿತು ಪಾಠ ಪ್ರವಚನ ಕೇಳುತ್ತಿದ್ದ ವಿದ್ಯಾರ್ಥಿಗಳು ಸೋಮವಾರ ಕೆಸರುಗದ್ದೆಗಿಳಿದು ಓಡಿದರು, ಕುಣಿದು ಕುಪ್ಪಳಿಸಿ, ತುಳುನಾಡಿನ ವಿವಿಧ ಗ್ರಾಮೀಣ ಕ್ರೀಡೆಗಳನ್ನು ಆಡಿ ಆನಂದಿಸಿದರು. ಇಲ್ಲಿಯವರೆಗೆ ಗದ್ದೆಗಿಳಿಯದ ಕೆಲವು ಮಕ್ಕಳು ಕೆಸರುಗದ್ದೆಗಿಳಿದು ಮೈಗೆ ಕೆಸರು ನೀರು ಚುಮುಕಿಸಿಕೊಂಡು, ತಮ್ಮ ಸಹಪಾಠಿಗಳಿಗು ಕೆಸರು ನೀರು ಹಾಯಿಸಿ ಖುಷಿಪಟ್ಟರು. ಆಟದ ವೇಳೆ ಕೆಲವು ಮಕ್ಕಳು ಕೆಸರು ನೀರಿನಲ್ಲಿ ಬಿದ್ದು ಎದ್ದು ಸಂಭ್ರಮಿಸಿದರು.
ಮಕ್ಕಳಿಗೆ ಕೃಷಿಯ ಪರಿಚಯವಾಗಬೇಕು. ಇಂದಿನ ಮಕ್ಕಳು ಎಂದರೆ ಕೇವಲ ಓದುವುದು ಮತ್ತು ಬರೆಯುವುದಕ್ಕೆ ಮಾತ್ರ ಸೀಮಿತವಾಗುತ್ತಿದ್ದಾರೆ. ಅವರಿಗೆ ಕೃಷಿ ಬಗ್ಗೆಯು ತಿಳಿಯಬೇಕಾದರೆ ಗದ್ದೆಯಲ್ಲಿ ಒಂದು ದಿನ ಕಳೆಯಬೇಕು. ಇಂತಹ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿಕೊಳ್ಳಬೇಕು ಎಂದು ಕೃಷಿಕ ರವಿ ಗುರ್ಮೆಟ್ಟು ಹೇಳಿದರು.
ಎಂ.ಕೆ ಶೆಟ್ಟಿ ಸೆಂಟ್ರಲ್ ಸ್ಕೂಲ್‍ನ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಪ್ರಾಂಶುಪಾಲೆ ನಿಶ್ಮಿತಾ, ಶಿಕ್ಷಕ ಮತ್ತು ಪೋಷಕರ ಸಮಿತಿ ಅಧ್ಯಕ್ಷ ಶಿವರಾಮ ಶೆಟ್ಟಿ, ಕಾರ್ಯದರ್ಶಿ ಶಶಿಧರ ಶೆಟ್ಟಿ, ಕಾರ್ಯಕ್ರಮದ ಸಂಯೋಜಕಿ, ಶಿಕ್ಷಕಿ ಸುಮಂಗಲಾ ವಿ. ಉಪಸ್ಥಿತರಿದ್ದರು. ಧೀಕ್ಷಾ ಸ್ವಾಗತಿಸಿದರು. ಹರ್ಷಿತಾ ವಂದಿಸಿದರು. ವಿದ್ಯಾರ್ಥಿಗಳ ಜತೆ ಶಿಕ್ಷಕರು ಗದ್ದೆಗಿಳಿದು ಸಂಭ್ರಮಿಸಿದರು.


