ಮೂಡುಬಿದಿರೆ: ಇಲ್ಲಿನ ಪೇಟೆಯ ಕಲ್ಸಂಕ ಬಳಿ ಇರುವ ಗೋಪಾಕೃಷ್ಣ ದೇವಸ್ಥಾನ ಮತ್ತು ಕೆರೆ ಬಸದಿಯ ಎದುರಿನಲ್ಲಿರುವ ಕೆರೆಗೆ ವ್ಯಕ್ತಿಯೊಬ್ಬರು ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

athmahathye
ಕಟ್ಟಿಗೆ ಒಡೆಯುವ ಹಾಗೂ ಕೂಲಿ ವೃತ್ತಿಯನ್ನು ಮಾಡುತ್ತಿದ್ದ ಕೋಟೆಬಾಗಿಲು-ಮರಿಯಾಡಿ ನಿವಾಸಿ ಮುನ್ನ (45) ಆತ್ಮಹತ್ಯೆಗೈದ ವ್ಯಕ್ತಿ. ಕುಡಿತದ ಚಟವನ್ನು ಹೊಂದಿದ್ದ ಮುನ್ನ ಬೆಳಿಗ್ಗೆಯಿಂದಲೇ ಕಲ್ಸಂಕ ಪರಿಸರದಲ್ಲಿ ಸುತ್ತಾಡಿಕೊಂಡಿದ್ದ ಎನ್ನಲಾಗಿದೆ. ಮಧ್ಯಾಹ್ನದ ವೇಳೆಗೆ ತನ್ನ ದಾಖಲೆ ಪತ್ರಗಳು, ಬಟ್ಟೆಬರೆ ಹಾಗೂ ಚಪ್ಪಲಿಯನ್ನು ಕೆರೆಯ ದಂಡೆಯಲ್ಲಿಟ್ಟು ಹಾರಿದ್ದು ಇದನ್ನು ಗಮನಿಸಿದ ಸ್ಥಳೀಯ ವ್ಯಕ್ತಿಯೊಬ್ಬರು ಕೆರೆಗೆ ಹಗ್ಗ ಎಸೆದು ಬದುಕಿಸಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ.
ಅಗ್ನಿ ಶಾಮಕ ದಳವು, ಅಗ್ನಿಶಾಮಕ ಠಾಣಾಧಿಕಾರಿ ಕಿಶೋರ್ ಕುಮಾರ್ ನೇತೃತ್ವದಲ್ಲಿ ಸಹಾಯಕ ಠಾಣಾಧಿಕಾರಿ ಪ್ರವೀಣ್ ಸಿಬ್ಬಂದಿಗಳಾದ ಮನೋಹರ ಪ್ರಸಾದ್, ಕುಮಾರ್, ಸುರೇಶ ರಾಥೋಡ್ ಮತ್ತು ಶಾಂತರಾಮ ಸಾತರ್ಕರ್ ಅವರು 2 ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಮೃತ ದೇಹವನ್ನು ಮೇಲೆತ್ತಿದ್ದಾರೆ. ಆತ್ಮಹತ್ಯೆಗೈದಿರುವ ವ್ಯಕ್ತಿಗೆ ಈರ್ವರು ಪತ್ನಿಯರಿದ್ದಾರೆ ಎಂದು ಹೇಳಲಾಗುತ್ತಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಘಟನೆ ನಡೆದ ಹಿನ್ನೆಲೆಯಲ್ಲಿ ಕೆರೆಯ ಸುತ್ತ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು.

By suddi9

Leave a Reply

Your email address will not be published. Required fields are marked *