ಬಂಟ್ವಾಳ: ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಬಾಲಕಿ ರಕ್ಷಿತಾ ಮೇಲೆ ನಡೆದ ಅತ್ಯಾಚಾರ ಹಾಗೂ ಅಮಾನುಷ ಕೊಲೆಯನ್ನು ಖಂಡಿಸಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಕುಲಾಲ ಕುಂಬಾರರ ಯುವ ವೇದಿಕೆ ಹಾಗೂ ಕುಲಾಲ ಹಿರಿಯ ನಾಗರಿಕರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಆರೋಪಿಗಳನ್ನು ಬಂಧಿಸಿ ಶೀಘ್ರ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿಯನ್ನು ಸಲ್ಲಿಸಲಾಯಿತು.

ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆಯ ಸ್ಥಾಪಕಾಧ್ಯಕ್ಷ ಡಾ. ಅಣ್ಣಯ್ಯ ಕುಲಾಲ್ ಮಾಧ್ಯಮದವರೊಂದಿಗೆ ಮಾತನಾಡಿ, ಬಾಲಕಿಯನ್ನು ವಿಕೃತವಾಗಿ ಅತ್ಯಾಚಾರ ಮಾಡಿ ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಇಂತಹ ಅತ್ಯಾಚಾರಿಗಳಿಗೆ ಸರಕಾರ ಅಥವಾ ಆಡಳಿತದ ಬಗ್ಗೆ ಭಯ ಇಲ್ಲ. ಈ ಹೇಯ ಕೃತ್ಯವನ್ನು ರಾಜ್ಯದ ಎಲ್ಲಾ ಕುಂಬಾರರ ಸಂಘಟನೆಗಳು ಖಂಡಿಸುತ್ತದೆ. ಇಂತಹ ಗತಿ ಯಾವುದೇ ಸಮುದಾಯದ ಹೆಣ್ಣು ಮಕ್ಕಳಿಗೆ ಆಗಬಾರದು. ಒಂದು ಬಡಕುಟುಂಬದ ಹೆಣ್ಣು ಮಕ್ಕಳಿಗೆ ಅನ್ಯಾಯ, ಅತ್ಯಾಚಾರವಾದಾಗ ಧ್ವನಿ ಎತ್ತುವವರ ಸಂಖ್ಯೆ ಕಡಿಮೆ ಇರುತ್ತದೆ. ಆದ್ದರಿಂದ ರಾಜ್ಯದ ಜನತೆ ಧ್ವನಿ ಎತ್ತಿ ನ್ಯಾಯಕ್ಕಾಗಿ ಹೋರಾಡಬೇಕು. ಹೆಣ್ಣು ಮಕ್ಕಳ ಕೊಲೆ ಅದು ಸಮಾಜದ , ಸಂಸ್ಕøತಿಯ ಕಗ್ಗೊಲೆ. ಇದು ಇಲ್ಲಿಗೆ ನಿಲ್ಲಬೇಕು, ಸರಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಆರೋಪಿಯನ್ನು ಬಂಧಿಸಿ ನೇಣುಗಂಬಕ್ಕೆ ಹಾಕಬೇಕು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಬಂಟ್ವಾಳ ವಿಧಾನಸಭಾ ಕ್ಷೇತ್ರ ಕುಲಾಲ, ಕುಂಬಾರರ ಯುವ ವೇದಿಕೆಯ ಅಧ್ಯಕ್ಷ ಸುಕುಮಾರ್ ಬಂಟ್ವಾಳ, ಗೌರವ ಸಲಹೆಗಾರ ಟಿ.ಶೇಷಪ್ಪ ಮಾಸ್ತರ್, ಸಂಘಟನೆಯ ಪ್ರಮುಖರಾದ ಎಚ್ಕೆ ನಯನಾಡು, ನಾರಾಯಣ ಸಿ. ಪೆರ್ನೆ, ಮಚ್ಚೇಂದ್ರ ಸಾಲ್ಯಾನ್, ರಮೇಶ್ ಸಾಲ್ಯಾನ್, ಮಾಧವ ಕುಲಾಲ್, ಗಂಗಾಧರ ಶೇರಾ, ಸುಂದರ್, ಕಾರ್ತಿಕ್, ಜನಾರ್ಧನ ಮಾಣಿ, ಉಮೇಶ್ ಆರ್.ಮೂಲ್ಯ, ಗಂಗಾಧರ ಮಾಸ್ತರ್, ಸೋಮನಾಥ, ದೀಪಕ್, ಸತೀಶ್ ಜಕ್ರಿಬೆಟ್ಟು, ಹರಿಪ್ರಸಾದ್, ಮಾಧವ ಮಾಣಿ ಮತ್ತಿತರರು ಉಪಸ್ಥಿತರಿದ್ದರು.
