ವಾಮಂಜೂರು:ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಲು ಪ್ರತಿಭಾ ಕಾರಂಜಿ ಸ್ಪರ್ಧೆಗಳು ಪೂರಕವಾಗಿವೆ. ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ತೊಡಗಿಸಿಕೊಂಡು ಸ್ಪರ್ಧಾ ಮನೋಭಾವದಿಂದ ಭಾಗವಹಿಸಿ ಸೋಲು- ಗೆಲುವುಗಳನ್ನು ಸಮಚಿತ್ತದಿಂದ ಸ್ವೀಕರಿಸಿ ದೇಶದ ಸತ್ಪ್ರಜೆಗಳಾಗಿ ಬೆಳೆಯಬೇಕೆಂದು ತಿರುವೈಲು ವಾರ್ಡ್ ಕಾರ್ಪೊರೇಟರ್ ಹೇಮಲತಾ ರಘು ಸಾಲ್ಯಾನ್ ಹೇಳಿದರು.
ಅವರು ಶುಕ್ರವಾರ ಎಸ್.ಡಿ.ಎಂ. ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಂಜೂರಿನಲ್ಲಿ ಮಂಗಳೂರು ದಕ್ಷಿಣ ವಲಯದ ತಿರುವೈಲು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಎಸ್.ಡಿ.ಎಂ. ಮಂಗಳಜ್ಯೋತಿ ಸಮಗ್ರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಅಶೋಕ್ ಕುಮಾರ್ ಪಿ. ಮಾತನಾಡಿ ಮಕ್ಕಳಲ್ಲಿ ಪ್ರತಿಭೆಗಳಿರುತ್ತವೆ. ಅವುಗಳನ್ನು ಪ್ರದರ್ಶಿಸಲು ಪ್ರತಿಭಾ ಕಾರಂಜಿ ಸ್ಪರ್ಧೆಗಳು ನಡೆಯುತ್ತಿರುವುದು ಮಕ್ಕಳ ಪಾಲಿಗೆ ಒಂದು ದೊಡ್ಡ ಸೌಭಾಗ್ಯ. ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸ್ಪರ್ಧಾ ಮನೋಭಾವದೊಂದಿಗೆ ಭಾಗವಹಿಸಬೇಕೆಂದು ಮಕ್ಕಳಿಗೆ ಕಿವಿಮಾತು ಹೇಳಿದರು. ಲೆಮೆನ್ಸಿಯಾ ಪಿಂಟೋ, ಶಿಕ್ಷಣ ಸಂಯೋಜಕರು, ಮಂಗಳೂರು ದಕ್ಷಿಣ ವಲಯ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಶಿಕ್ಷಣ ಇಲಾಖೆಯಿಂದ ನಡೆಯುವ ಈ ಸ್ಪರ್ಧೆಗಳು ಎಲ್ಲಾ ವರ್ಗದವರಿಗೆ ಮುಕ್ತವಾಗಿ ಭಾಗವಹಿಸುವ ಅವಕಾಶವಿದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಿನಂತಿಸಿದರು.
ಮಂಗಳಜ್ಯೋತಿ ಸಮಗ್ರ ಶಾಲೆಯ ಸಂಚಾಲಕರಾದ ಪ್ರೊ. ಎ. ರಾಜೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತಾಧಿಕಾರಿ ಶ್ರೀ ಗಣೇಶ್ ಭಟ್ ವಿ. ಉಪಸ್ಥಿತರಿದ್ದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ಅಕ್ಷತಾ ಜನಾರ್ಧನ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ ರೂಪಲತಾ ಸಿ.ಆರ್.ಪಿ. ತಿರುವೈಲು ಕ್ಲಸ್ಟರ್ ಸ್ವಾಗತಿಸಿ ಮಾರೈಟ್ ಮಸ್ಕರೇನ್ಹಸ್ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಂದಿಸಿದರು. ಹಿರಿಯ ಶಿಕ್ಷಕಿ ರೇಣುಕಾ ಕೆ.ಎಸ್. ಕಾರ್ಯಕ್ರಮ ನಿರೂಪಿಸಿದರು.

