ವಾಮಂಜೂರು: ಗೋ ರಕ್ಷಣೆಯ ಕಾಲ ಈಗ ಬಂದಿದೆ. ಇಲ್ಲಿ ವಿಭಿನ್ನ ರೀತಿಯಲ್ಲಿ ಅಕ್ರಮ ಕಸಾಯಿಖಾನೆಗಳು ಕಾರ್ಯ ನಿರ್ವಹಿಸುತ್ತಿವೆ. ಮೂಡುಶೆಡ್ಡೆಯಂತಹ ಪ್ರದೇಶದಲ್ಲಿ ಮಹಿಳೆಯರಿರುವ ಮನೆಗಳ ಹಟ್ಟಿಗಳಿಗೆ ನುಗ್ಗಿ, ತಲ್ವಾರ್ ಝಳಪಿಸಿ ಗೋವು ಕಳ್ಳತನ ಮಾಡುವಂತಹ ಮತಾಂಧರು, ಷಂಡರು ಸೃಷ್ಟಿಯಾಗಿದ್ದಾರೆ. ಗೋ ರಕ್ಷಿಸಿದವರ ವಿರುದ್ಧ ಐಪಿಸಿ ಸೆಕ್ಷನ್ ದಾಖಲಿಸುವ ನೀವು(ಪೊಲೀಸರು) ಗೋಕಳ್ಳರು, ಗೋಸಾಗಾಟದಾರರ ವಿರುದ್ಧ ಕಾನೂನು ಹೇರುತ್ತಿಲ್ಲ ಎಂದು ಬಜರಂಗ ದಳದ ಪ್ರಾಂತ ಸಹ ಸಂಚಾಲಕ ಮುರಳೀಧರ ಹಸಂತಡ್ಕ ಸವಾಲೆಸೆದರು.
ವಾಮಂಜೂರು ಜಂಕ್ಷನಿನಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಮಾತೃಶಕ್ತಿ ದುರ್ಗಾವಾಹಿನಿ ಮಂಗಳೂರು ಜಿಲ್ಲೆ ಆಯೋಜಿಸಿದ `ಅಕ್ರಮ ಗೋಕಳ್ಳತನ, ಗೋಸಾಗಾಟ ಹಾಗೂ ಗೋಹತ್ಯೆ’ ವಿರುದ್ಧ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾವಿನ್ನು ಕೈಕಟ್ಟಿ ಕುಳಿತುಕೊಳ್ಳವಂತಿಲ್ಲ. ದೇಶದಲ್ಲಿ ಗೋವಿಗಾಗಿ ಎರಡನೇ ಸ್ವಾತಂತ್ರ್ಯ ಹೋರಾಟ ನಡೆದರೂ ಅಚ್ಚರಿಪಡಬೇಕಾಗಿಲ್ಲ. ನಮ್ಮ ಒಂದು ಕೆನ್ನೆಗೆ ಹೊಡೆದರೆ ನಾವು 10 ಮತಾಂಧರ ಕೆನ್ನೆಗೆ ಹೊಡೆಯುವ ಕಾಲ ಬಂದಿದೆ. ಗೋಮಾತೆಗಾಗಿ ರಕ್ತಪಾತವಾಗಬಹುದು ಎಂದವರು ಗುಡುಗಿದರು.
ಜರಂಗ ದಳದ ಪ್ರಾಂತ ಸಂಯೋಜಕ ಸುನಿಲ್ ಕೆ ಆರ್ ಮಾತನಾಡುತ್ತ, ಗೋವಿನ ರಕ್ಷಣೆ ನಮ್ಮ ಹೊಣೆ. ಗೋಹತ್ಯೆ, ಅಕ್ರಮ ಕಸಾಯಿಖಾನೆ, ಅಕ್ರಮ ಗೋಸಾಗಾಟದ ವಿರುದ್ಧ ಹಿಂದೂ ಸಮಾಜ ಒಗ್ಗೂಡಬೇಕು. ಹಿಂದೂಗಳ ಸ್ವಾಭಿಮಾನಕ್ಕೆ ಧಕ್ಕೆಯಾಗದಾಗ ಎಲ್ಲರೂ ಸೆಟೆದು ನಿಲ್ಲಬೇಕು ಎಂದರು.
ವಿಶ್ವ ಹಿಂದೂ ಪರಿಷತ್ತಿನ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಮಾತನಾಡುತ್ತ, ಗೋವು ನಮ್ಮ ನಾಡಿನ ಸಂಪತ್ತು. ಗೋವುಗಳ ರಕ್ಷಣೆಗಾಗಿ ನಾವು `ಗೋ ರಕ್ಷಣಾ ದಳ’ ರಚಿಸಿದರೆ ಎಸ್‍ಡಿಪಿಐ ನಮ್ಮ ವಿರುದ್ಧ ಜಿಲ್ಲಾಡಳಿತಕ್ಕೆ ದೂರು ನೀಡುತ್ತದೆ. ಇದರ ಬದಲು ಗೋಕಳ್ಳತನ ಮಾಡುವವರ ವಿರುದ್ಧ ಮುಸ್ಲಿಂ ಮುಖಂಡರು `ಫತ್ವಾ’ ಹೊರಡಿಸುವ ಧೈರ್ಯ ತೋರಿಸಲಿ. ಆಗ ಮಾತ್ರ ಈ ಸಮಾಜದಲ್ಲಿ ಭಾವೈಕ್ಯತೆ ಮತ್ತು ಶಾಂತಿ ನೆಲೆಸಲು ಸಾಧ್ಯ. ಕುದ್ರೋಳಿಯಲ್ಲಿ ಒಂದು ಅಧಿಕೃತ ಕಸಾಯಿಖಾನೆ ಇದ್ದರೂ, ಜಿಲ್ಲೆಯಲ್ಲಿ ಸಾವಿರಾರು ಕಿಲೋ ಗೋಮಾಂಸ ಮಾರಾಟವಾಗುತ್ತಿದೆ. ಇದು ಎಲ್ಲಿಂದ ಬರುತ್ತದೆ ? ಇದಕ್ಕೆ ಪೊಲೀಸರಲ್ಲಿ ಉತ್ತರವಿದೆಯೇ ಎಂದು ಪ್ರಶ್ನಿಸಿದರು.
ದುರ್ಗಾವಾಹಿನಿ ವಿಭಾಗ ಸಂಚಾಲಕಿ ವಿದ್ಯಾ ಮಲ್ಯ ಮಾತನಾಡುತ್ತ, ಹಿಂದೂಗಳೇ ಈಗ ಮಲಗುವ ಕಾಲವಲ್ಲ. ಶಾಸ್ತ್ರ ಕಲಿತ ನಾವಿಂದು `ಶಸ್ತ್ರ’ ಕೈಗೆತ್ತಿಕೊಳ್ಳುವ ಸಮಯ ಬಂದಿದೆ. ತಾಯಂದಿರುವ ಶಸ್ತ್ರ ಹಿಡಿದುಕೊಂಡಾಗ ಮಾತ್ರ ಹೆಣ್ಮಕ್ಕಳ ರಕ್ಷಣೆ ಜೊತೆಗೆ ಗೋಮಾತೆಯ ರಕ್ಷಣೆ ಸಾಧ್ಯ ಎಂದರು.
ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷ ಜಗದೀಶ ಶೇಣವ ಸ್ವಾಗತಿಸಿ, ಸಭೆಯ ಉದ್ದೇಶ ವಿವರಿಸಿದರು. ವೇದಿಕೆಯಲ್ಲಿ ಭುಜಂಗ ಕುಲಾಲ್(ವಿಭಾಗ ಸಂಚಾಲಕ), ಗೋಪಾಲ ಕುತ್ತಾರ್(ಕಾರ್ಯಾಧ್ಯಕ್ಷ), ಪ್ರದೀಪ್ ಪಂಪ್ವೆಲ್(ಬಜರಂಗ ದಳ ಜಿಲ್ಲಾ ಸಹ-ಸಂಚಾಲಕ), ವಿಹಿಂಪ ಗುರುಪುರ ಪ್ರಖಂಡ ಅಧ್ಯಕ್ಷ ವಿಷ್ಣು ಕಾಮತ್ ಮೊದಲಾದ ಹಿಂದೂ ಮುಖಂಡರು ಇದ್ದರು. ಸಭೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಉಪಸ್ಥಿತರಿದ್ದರು. ವಿಹಿಂಪ ಜಿಲ್ಲಾ ಸಹ-ಸಂಚಾಲಕ ಪ್ರದೀಪ್ ಸರಿಪಳ್ಳ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣ ಕಜೆಪದವು ವಂದಿಸಿದದರು. ಮೂಡುಶೆಡ್ಡೆ ಶ್ರೀರಾಮ ಮಂದಿರದಲ್ಲಿ ಉದ್ಘಾಟನೆಗೊಂಡ ಪ್ರತಿಭಟನಾ ಜಾಥಾ ವಾಮಂಜೂರಿನವರೆಗೆ ಸಾಗಿ ಬಂತು.
——
ಬಾಕ್ಸ್ :-
ಶರಣ್ ಪಂಪ್ವೆಲ್ ಕೂಗು
* ಗೋವುಗಳ ಸಾಗಾಟ ತಡೆಗೆ ಚೆಕ್-ಪೋಸ್ಟ್ ಸ್ಥಾಪಿಸಬೇಕು.
* ಗೋ ಕಳೆದುಕೊಂಡವರಿಗೆ ಜಿಲ್ಲಾಡಳಿತ ಸೂಕ್ತ ಪರಿಹಾರ ನೀಡಬೇಕು.
* ಅನಧಿಕೃತ ಗೋಮಾಂಸದ ಸ್ಟಾಲುಗಳು/ಕಸಾಯಿಖಾನೆಗಳ ವಿಚಾರಣೆ ಮತ್ತು ಅವುಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು.
* ರಾಜ್ಯ ಸರ್ಕಾರದಿಂದ ಪ್ರತಿ ತಾಲೂಕಿನಲ್ಲಿ ಗೋಶಾಲೆ ಸ್ಥಾಪಿಸಿ, ಅನುದಾನ ನೀಡಬೇಕು.
