ಬಂಟ್ವಾಳ:ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆ ಸಮೀಪದಲ್ಲಿ ಜೆಡಿಎಸ್ ಮುಖಂಡರೊಬ್ಬರ ಮನೆಯಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಆಧಾರ್ ಕೇಂದ್ರಕ್ಕೆ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದ ಅಧಿಕಾರಿಗಳು ಮತ್ತು ಪೊಲೀಸರ ತಂಡವು ಬುಧವಾರ ಮಧ್ಯಾಹ್ನ ದಿಢೀರ್ ದಾಳಿ ನಡೆಸಿ ಮೂವರನ್ನು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ.ಇಲ್ಲಿನ ನಿವಾಸಿ, ಜೆಡಿಎಸ್ ಮುಖಂಡ ಹಾರೂನ್ ರಶೀದ್, ಪುತ್ತೂರು ಒಳಮೊಗರು ನಿವಾಸಿ ಫ್ರಾನ್ಸಿಸ್ ಪ್ರಶಾಂತ್ ಡಿಸೋಜ ಮತ್ತು ಪ್ರಕಾಶ ಎಂಬವರನ್ನು ವಿಚಾರಣೆಗಾಗಿ ನಗರ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಬಂಟ್ವಾಳದಲ್ಲಿ ಹಾರೂನ್ ರಶೀದ್ ಎಂಬವರ ಮನೆಯಲ್ಲಿ ಕಳೆದ ಎರಡು ದಿನಗಳಿಂದ ಅನಧಿಕೃತವಾಗಿ ಆಧಾರ್ ಕೇಂದ್ರ ಕಾರ್ಯಚರಿಸುತ್ತಿರುವ ಬಗ್ಗೆ ನಾಗರಿಕರು ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದ್ದು, ಇವರಿಂದ ಲ್ಯಾಪ್ಟಾಪ್, ಕ್ಯಾಮೆರಾ, ಪ್ರಿಂಟರ್, ಬೆರಳಚ್ಚು ಯಂತ್ರ ಮತ್ತಿತರ ಸಾಮಾಗ್ರಿ ವಶಪಡಿಸಿಕೊಳ್ಳಲಾಗಿದೆ. ಈತನು ಕಳೆದ ಎರಡು ದಿನಗಳಲ್ಲಿ 14 ಹೊಸ ಆಧಾರ್ ಕಾರ್ಡ್ ಮತ್ತು 80 ತಿದ್ದುಪಡಿ ಸೇರಿದಂತೆ ಒಟ್ಟು 94 ಆಧಾರ್ ಕಾರ್ಡ್ ವಿತರಿಸಿ ಗ್ರಾಹಕರಿಂದ ದುಬಾರಿ ಹಣ ಪಡೆದಿರುವ ಬಗ್ಗೆ ದಾಖಲೆ ದೊರೆತಿದೆ. ಪುತ್ತೂರು ತಾಲ್ಲೂಕಿನ ಕಡಬ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಧಾರ್ ಕೇಂದ್ರ ತೆರೆಯುವುದಕ್ಕಾಗಿ ಜಿಲ್ಲಾಡಳಿತದಿಂದ ವಿಶೇಷ ತರಬೇತಿ ಪಡೆದಿರುವುದಾಗಿ ಹೇಳಿಕೊಂಡಿರುವ ಫ್ರಾನ್ಸಿಸ್ ಪ್ರಶಾಂತ್ ಡಿಸೋಜ ಬಂಟ್ವಾಳದಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಮನೆಯೊಳಗೆ ಆಧಾರ್ ಕೇಂದ್ರ ತೆರೆದಿರುವುದು ತಪ್ಪು. ಇದರಿಂದಾಗಿ ಈ ಬಗ್ಗೆ ನಗರ ಠಾಣೆಗೆ ದೂರು ಸಲ್ಲಿಸಿರುವುದಾಗಿ ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.
ಪ್ರತಿದಿನ ಆಧಾರ್, ಪಡಿತರ ಚೀಟಿ, ಮನೆ ನಿವೇಶನ ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹಲವಾರು ಮಂದಿ ನನ್ನ ಬಳಿ ಬರುತ್ತಿದ್ದು, ಅವರಿಗೆ ಉಚಿತ ಸೇವೆ ನೀಡುವುದಕ್ಕಾಗಿ ಎರಡು ದಿನಗಳ ಮಟ್ಟಿಗೆ ಮನೆಯಲ್ಲಿ ತಾತ್ಕಾಲಿಕವಾಗಿ ಆಧಾರ್ ಕೇಂದ್ರ ತೆರೆದಿರುವುದಾಗಿ ಜೆಡಿಎಸ್ ಮುಖಂಡ ಹಾರೂನ್ ರಶೀದ್ ಪ್ರತಿಕ್ರಿಯಿಸಿದ್ದಾರೆ. ನಗರ ಠಾಣಾಧಿಕಾರಿ ಚಂದ್ರಶೇಖರ್, ಗ್ರಾಮಾಂತರ ಠಾಣಾಧಿಕಾರಿ ಪ್ರಸನ್ನ ಎಂ., ಕ್ರೈಂ ಎಸೈ ಹರೀಶ್, ಸಿಬ್ಬಂದಿಗಳಾದ ಶಿವರಾಮ, ಮುರುಗೇಶ್, ಕೃಷ್ಣ, ಕಂದಾಯ ನಿರೀಕ್ಷಕ ನವೀನ್ ಕುಮಾರ್, ಗ್ರಾಮಕರಣಿಕ ರಾಜು ಲಮಾಣಿ, ಸೀತಾರಾಮ ಕೆಮ್ಮಾಜೆ, ಸದಾಶಿವ ಕೈಕಂಬ, ಪ್ರಭಾವತಿ ಮತ್ತಿತರರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.
–
