ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಪ್ರಥಮ ಎಂಬಂತೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕೇಂದ್ರ ಸರ್ಕಾರದ ನೀತಿ ಆಯೋಗದ ಅಟಲ್ ಇನೋವೇಷನ್ ಮಿಷನ್ ಯೋಜನೆ ಅಡಿಯಲ್ಲಿ ಆರಂಭಗೊಂಡ `ಅಟಲ್ ಟಿಂಕರಿಂಗ್ ಲ್ಯಾಬ್’ ಅನ್ನು ಭಾರತೀಯ ಬಾಹ್ಯಾಖಾಶ ಸಂಶೋಧನಾ ಸಂಸ್ಥೆ ಇಸ್ರೋದ ಪೂರ್ವಾಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಸೋಮವಾರ ಲೋಕಾರ್ಪಗೈದರು.
ಬಳಿಕ ಮಾತನಾಡಿದ ಅವರು, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ವಿಶ್ವವೇ ಬೆರಗಾಗುವ ಮಾದರಿಯಲ್ಲಿ ಮುನ್ನಡೆಯುತ್ತಿದೆ. ಭಾರತದ ವೈಜ್ಞಾನಿಕ ಕ್ಷಮತೆ, ತಂತ್ರಜ್ಞಾನದ ಕ್ಷಮತೆ ಬೇರೆ ದೇಶಗಳ ತಂತ್ರಜ್ಞಾನದ ವಿಸ್ತಾರಕ್ಕೂ ನೆರವಾಗುತ್ತಿದೆ ಎಂದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ರವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿಜ್ಞಾನ ಕ್ಷೇತ್ರಕ್ಕೆ ಭಾರತ ಕೊಟ್ಟಿರುವ ವಿವಿಧ ಕೊಡುಗೆಗಳನ್ನು ಉಲ್ಲೇಖಿಸಿದರು. ಪ್ರಕೃತಿಯನ್ನು ವಿದೇಶಿ ಕನ್ನಡಕದಿಂದಲೇ ನೋಡಬೇಕೆನ್ನುವ ಕೆಲ ದೇಶಗಳ ನಡೆ ಆತಂಕಕಾರಿ ಎಂದ ಅವರು, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಮೂಡಿಸುವಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಯಶಸ್ವಿಯಾಗಲಿ ಎಂದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ನಾರಾಯಣಶೆಟ್ಟಿಮುಂಬೈ, ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್ ವೆಂಕಟೇಶ್ ಮೈಸೂರು, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ಜಿಲ್ಲಾ ಗಣಿತ ವಿಷಯ ಪರೀಕ್ಷಕ ರಾಧಾಕೃಷ್ಣ ಭಟ್, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ , ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ವಾಗಿ ಉದ್ಘಾಟನೆಗೊಂಡ ಈ ಪ್ರಯೋಗಾಲಯದಲ್ಲಿ 6 ರಿಂದ 12 ವರ್ಷದೊಳಗಿನ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕ್ಷೇತ್ರದ ಕುರಿತಾಗಿ ಕುತೂಹಲ, ಆಸಕ್ತಿಯನ್ನು ಹೆಚ್ಚಿಸಿ, ಅದನ್ನು ಉತ್ತೇಜಿಸುವ ವಿವಿಧ ಸಲಕರಣೆಗಳನ್ನು ಜೋಡಿಸಲಾಗಿದೆ.
ಹೊಸಹೊಸ ಸಂಶೋಧನೆಗಳನ್ನು ಮಾಡುವ ಯುವ ವಿಜ್ಞಾನಿಗಳಿಗೆ ಅದಕ್ಕೆ ಪೂರಕವಾದ ಮಾಹಿತಿ, ಮಾರ್ಗದರ್ಶನವನ್ನು ನೀಡುವ, ವೈಜ್ಞಾನಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಲು ಪ್ರೇರೇಪಿಸುವ ವಿವಿಧ ಯಂತ್ರಗಳು, ಪುಸ್ತಕಗಳು ಗಮನ ಸೆಳೆಯುತ್ತಿದೆ. ಸೈನ್ಸ್(ವಿಜ್ಞಾನ), ಟೆಕ್ನಾಲಜಿ(ತಂತ್ರಜ್ಞಾನ), ಇಂಜಿನಿಯರಿಂಗ್, ಮೆಥಮೆಟಿಕ್ಸ್(ಗಣಿತಶಾಸ್ತ್ರ) ವಿಚಾರ ಜೊತೆಯಾಗಿ ಸ್ಟೆಮ್ ಹೆಸರಿನಲ್ಲಿ ಮಕ್ಕಳಲ್ಲಿ ಆಸಕ್ತಿ ಹೆಚ್ಚುವಂತೆ ಮಾಡುವ ವಿವಿಧ ವಿಜ್ಞಾನ ಮಾಡೆಲ್ಗಳು ನಿಜಕ್ಕೂ ಕುತೂಹಲವನ್ನು ಹೆಚ್ಚಿಸುವಂತಿದೆ.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ 2500 ಚದರ ಅಡಿ ವಿಸ್ತೀರ್ಣದ ಕೊಠಡಿಯಲ್ಲಿ ನಿರ್ಮಾಣಗೊಂಡಈ ಲ್ಯಾಬ್ ನಲ್ಲಿ ಪ್ರಸ್ತುತ 3ಡಿ ಪ್ರಿಂಟರ್, ರೋಬೋಟ್ಗಳು, 35 ಕ್ಕೂ ಅಧಿಕ ಸೆನ್ಸಾರ್ ಗಳು ಸೇರಿದಂತೆ ಅತ್ಯಾಧುನಿಕ ವೈಜ್ಞಾನಿಕ ಸಲಕರಣೆಗಳು, ಪ್ರಯೋಗ ಮಾಪನಗಳು, ವಸ್ತುಗಳು ಇಲ್ಲಿ ಅಚ್ಚುಕಟ್ಟಾಗಿ ಜೋಡಿಸಿಡಲಾಗಿದೆ.



