ಕೈಕಂಬ: ಗಂಜಿಮಠ ಗ್ರಾಮ ಪಂಚಾಯತ್‍ನ ಗ್ರಾಮ ಸಭೆಯಲ್ಲಿ ಕಸದ ಸಮಸ್ಯೆಯ ಬಗ್ಗೆ ದೂರಿಕೊಂಡಿದ್ದಲ್ಲದೆ, ಮುಂದಿನ ಗ್ರಾಮಸಭೆಯೊಳಗಡೆ ಕಸ ವಿಲೇವಾರಿಗೊಂಡು ನಿರ್ಮಲ ಗ್ರಾಮ ಎಂದು ಹೆಸರು ಪಡೆಯದೇ ಇದ್ದರೆ ಧರಣಿ ಕುಳಿತುಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

1007malali2
ಪಂಚಾಯತ್ ವ್ಯಾಪ್ತಿಯಲ್ಲಿ ಸಾಕಷ್ಟು ಕಡೆ ಕಸದ ಸಮಸ್ಯೆ ಇದ್ದು ಗ್ರಾಮಸ್ಥರಾದ ನಾವು ಸಂಕಷ್ಟ ಅನುಭವಿಸುತ್ತಿದ್ದೇವೆ. ಕೆಲವರು ಗಂಜಿಮಠ, ಕೈಕಂಬದ ರಸ್ತೆಯ ಬದಿಯಲ್ಲಿ ಕಸ ಎಸೆದುಹೋಗುತ್ತಿದ್ದಾರೆ. ಇದು ನಮ್ಮ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಧರಣಿ ನಡೆಸುವ ಎಚ್ಚರಿಕೆಯನ್ನು ನೀಡಿದರು. ಆಗ ಮಾತನಾಡಿದ ಪಿಡಿಓ ಜಗದೀಶ್ ಅವರು, ಕಸದ ಸಮಸ್ಯೆಯ ಬಗ್ಗೆ ಪಂಚಾಯತ್ ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ. ಕಸ ಎಸೆಯುವವರ ವಿರುದ್ಧ ನೋಟೀಸ್ ಕೂಡಾ ಜಾರಿಗೊಳಿಸಲಾಗುತ್ತಿದೆ. ಆದರೂ ಸಮಸ್ಯೆ ಸಮಸ್ಯೆಯಾಗಿಯೇ ಉಳಿದುಕೊಂಡಿದ್ದು, ಈ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಂಡು ಕಸದ ಸಮಸ್ಯೆಯ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ನುಡಿದರು. ಪಂಚಾಯತ್ ಅಧ್ಯಕ್ಷೆ ಮಾಲತಿಯವರು ಮಾತಾಡಿ, ಕಸದ ಸಮಸ್ಯೆಯನ್ನು ನಿವಾರಿಸಲು ವಾರಕ್ಕೊಮ್ಮೆ ಪಾಲಿಕೆಯ ವಾಹನದಿಂದ ಕಸವನ್ನು ವಿಲೇವಾರಿ ನಡೆಸಲಾಗುತ್ತದೆ. ಆದರೆ ಇದಾದ ಐದು ನಿಮಿಷದಲ್ಲಿ ಮತ್ತೆ ಅದೇ ಜಾಗದಲ್ಲಿ ಕಸ ಎಸೆದುಹೋಗುತ್ತಾರೆ. ಹೀಗೆ ಹಲವಾರು ಮಂದಿಯನ್ನು ಹಿಡಿದು ಎಚ್ಚರಿಕೆ ನೀಡಿದರೂ ಪ್ರಯೋಜನವಾಗುತ್ತಿಲ್ಲ. ಇದಕ್ಕಾಗಿ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಾಪಿಸಿ ಕಸದ ವಿಲೇವಾರಿಗೆ ಕ್ರಮ ಕೈಗೊಳ್ಳುತ್ತೇವೆ ಎಂದು ನುಡಿದರು.
ತಾಲೂಕು ಪಂಚಾಯತ್ ಸದಸ್ಯರಾದ ಸುನಿಲ್ ಅವರು ಮಾತಾಡಿ, ಕಸದ ಬಗ್ಗೆ ಎಲ್ಲರೂ ಜಾಗೃತರಾಗಿದ್ದಾರೆ. ನಮ್ಮ ಮನೆಯ ಕಸವನ್ನು ನಾನೇ ವಿಲೇವಾರಿ ಮಾಡುತ್ತೇನೆ. ಜನರು ಕಸದ ಬಗ್ಗೆ ಜಾಗೃತರಾಗಬೇಕು. ಈ ವಿಚಾರದ ಬಗ್ಗೆ ಪಂಚಾಯತ್ ಗಂಭೀರವಾಗಿ ಪರಿಗಣಿಸಿ ಸ್ವಚ್ಛತೆಯನ್ನು ಕೈಗೊಳ್ಳಬೇಕು. ಇದಕ್ಕಾಗಿ ನಾನು ಸಂಪೂರ್ಣ ನೆರವನ್ನು ನೀಡುತ್ತೇನೆ ಎಂದು ನುಡಿದರು.
ನೋಡಲ್ ಅಧಿಕಾರಿಯಾಗಿದ್ದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿರುವ ಗೀತಾ ಅವರು ಮಾತಾಡಿ, ಸ್ವಚ್ಛತೆಯ ಬಗ್ಗೆ ನಮ್ಮಲ್ಲಿಯೇ ಜಾಗೃತಿ ಮೂಡಬೇಕು. ಇದಕ್ಕಾಗಿ ಪಂಚಾಯತ್ ಮಟ್ಟದಲ್ಲಿ ಆಂದೋಲನವನ್ನು ರೂಪಿಸಿ ಜನರೇ ಸ್ವಚ್ಛತೆಯಲ್ಲಿ ಸಹಭಾಗಿಗಳಾದರೆ ಒಂದೇ ವರ್ಷದಲ್ಲಿ ಕಸದ ಸಮಸ್ಯೆ ನಿವಾರಣೆಯಾಗುತ್ತದೆ. ಪಂಚಾಯತ್‍ನವರು ಇದರ ಬಗ್ಗೆ ಗಂಭೀರವಾಗಿ ಚಿಂತಿಸಿದ್ದು, ಅವರಿಗೂ ಒಂದಷ್ಟು ಕಾಲ ಕೊಡಿ ಎಂದು ವಿನಂತಿಸಿದರು.
ಕಸದ ಬಗ್ಗೆ ಗ್ರಾಮಸ್ಥರು ಕೆಲವೊಂದು ಸಲಹೆಗಳನ್ನು ನೀಡಿದರು. ಕಸಕ್ಕಾಗಿ ಸೂಕ್ತ ಜಾಗ, ವಾಹನದಲ್ಲಿ ಸಾಗಿಸಲು ಕ್ರಮ, ಕಸದ ವಿಂಗಡನೆ, ಕಸ ಎಸೆಯುವವರಿಗೆ ಕಾನೂನು ಕ್ರಮ, ಅಗತ್ಯವಿದ್ದ ಕಡೆಗಳಲ್ಲಿ ಸಿಸಿ ಕೆಮರಾ ಅಳವಡಿಕೆಯ ಬಗ್ಗೆ ತಿಳಿಹೇಳಿದರು. ಎಲ್ಲವನ್ನೂ ಆಲಿಸಿಕೊಂಡ ಪಂಚಾಯತ್ ವಿಂಗಡಣೆಯಾಗುವ ಹಾಗೂ ವಿಂಗಡಣೆಯಾಗದ ಕಸವನ್ನು ಬೇರ್ಪಡಿಸಿ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು, ಕಸ ಎಸೆಯುವವರಿಗೆ ಕಾನೂನು ಕ್ರಮ ಜರಗಿಸುವುದು, ವಾಹನಗಳಲ್ಲಿ ಕಸ ವಿಲೇವಾರಿ, ಹೊಂಡ, ರಿಂಗ್ ನಿರ್ಮಿಸಿ ಹೀಗೆ ಯಾವುದಾದರೊಂದು ಕೆಲಸವನ್ನು ನಿರ್ವಹಿಸಿ ಕಸವಿಂಗಡಣೆ ಮಾಡುತ್ತೇವೆ. ಅಂದಾಜುಪಟ್ಟಿ ತಯಾರಿಸಿ ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ನಿರ್ಧರಿಸುವುದಾಗಿ ತಿಳಿಸಿದರು.
ಸಭೆಯಲ್ಲಿ ರಸ್ತೆ, ನೀರು, ವಿದ್ಯುತ್, ಆರೋಗ್ಯ, ಪಶು, ಶಿಶು, ಕೃಷಿ ಇತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ವಿವಿಧ ಇಲಾಖೆಯ ಸಂನ್ಮೂಲ ವ್ಯಕ್ತಿಗಳು, ಗ್ರಾಮ ಪಂಚಾಯತ್ ಸದಸ್ಯರು ಹಾಜರಿದ್ದರು.
* ಗಂಜಿಮಠ ಕಂಪೆನಿಗೆ ಬರುವ ಹೊರಗಿನವರ ಬಗ್ಗೆ ನಿಗಾ ವಹಿಸಬೇಕು.
* ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸಮಗ್ರಯೋಜನೆಗಳ ಅನುಷ್ಠಾನಕ್ಕೆ ಕ್ರಮ
* ಚರಂಡಿ, ರಸ್ತೆ ಅವ್ಯವಸ್ಥೆಯ ಬಗ್ಗೆ ಹೆದ್ದಾರಿ ಇಲಾಖೆಯ ಗಮನಸೆಳೆಯಬೇಕು
* ಮಳೆಹಾನಿಗೆ ಸ್ಪಂದಿಸಿ ಸಂತ್ರಸ್ಥರಿಗೆ ಸೂಕ್ತ ಪರಿಹಾರ ಕೊಡಿಸಬೇಕು

..
`ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್‍ಗಳ ಬಗ್ಗೆ ಹೆತ್ತವರಲ್ಲೂ ಜಾಗೃತಿ ಮೂಡಬೇಕು. ಪ್ಯಾಡ್‍ಗಳನ್ನು ವಿಲೇವಾರಿ ಮಾಡುವ ವ್ಯವಸ್ಥೆ ಇಂದು ನಮ್ಮಲ್ಲಿಲ್ಲ. ಮಹಿಳೆಯರು ಮುಜುಗರ ಪಡುವ ವಿಚಾರವಾಗಿರುವುದರಿಂದ ಇದರ ಬಗ್ಗೆ ಸಮಗ್ರ ನಿರ್ವಹಣೆಯ ಬಗ್ಗೆ ತಿಳಿಹೇಳಬೇಕಾಗಿದೆ. ಮಂಗಳೂರಿನಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹಕ್ಕೂ ಪ್ಯಾಡ್‍ಗಳೂ ಕಾರಣವೆಂದರೆ ತಪ್ಪಾಗಲಾರದು.’
ಗೀತಾ, ನೋಡಲ್ ಅಧಿಕಾರಿ

 

By suddi9

Leave a Reply

Your email address will not be published. Required fields are marked *