ಕೈಕಂಬ: ಕಾಂಕ್ರೀಟ್ ರಸ್ತೆ ನಿರ್ಮಿಸಿದ ಗುತ್ತಿಗೆದಾರರು ರಸ್ತೆಯ ಅಂಚಿನಲ್ಲಿ ಮಣ್ಣು ಸುರಿದು ಮಾಡಿದ ಎಡಟ್ಟಿನಿಂದಾಗಿ ಬಳ್ಳಾಜೆ ಎಸ್.ಸಿ. ಕಾಲನಿಯ ನಿವಾಸಿಗಳು ಸಮಸ್ಯೆಯನ್ನು ಎದುರಿಸುವಂತಾಗಿದೆ. ಮುತ್ತೂರು ಪಂಚಾಯತ್‍ನ ಕುಳವೂರು ಅಂಬೇಡ್ಕರ್ ಭವನದಿಂದ ಬಳ್ಳಾಜೆ ಹೊಸಮನೆ ಎಸ್.ಸಿ. ಕಾಲನಿ ರಸ್ತೆಯನ್ನು ಕಳೆದ ಎಪ್ರಿಲ್‍ನಲ್ಲಿ ಕಾಂಕ್ರೀಟೀಕರಣಗೊಳಿಸಲಾಗಿತ್ತು, ಅದರೆ ಮಳೆನೀರು ಹರಿದು ಹೊಗುವ ಚರಂಡಿ ವ್ಯವಸ್ಥೆ ಇರಲಿಲ್ಲ. ಗುತ್ತಿಗೆದಾರರು ಕಳೆದ ಎರಡು ದಿನಗಳ ಹಿಂದೆ ಕಾಂಕ್ರೀಟ್ ರಸ್ತೆಯ ಅಂಚಿಗೆ ಮಣ್ಣು ಸುರಿದಿದ್ದ ಪರಿಣಾಮ ಸಮಸ್ಯೆಯನ್ನು ಸೃಟ್ಟಿಸಿದೆ ಮಳೆ ನೀರಿನೊಂದಿಗೆ ಮಣ್ಣು ಸೇರಿ ರಸ್ತೆಯ ಪಕ್ಕದ ಮನೆಗಳ ಅಂಗಳಕ್ಕೆ ನುಗ್ಗಿದ್ದು ಅಂಗಳವೆಲ್ಲಾ ಕೆಸರಿನಿಂದ ತುಂಬಿ ಮನೆ ಮಂದಿ ಕೆಸರಿನಲ್ಲಿಯೇ ಮನೆ ಸೇರಬೇಕಾದ ಪರಿಸ್ಥಿತಿ ಉಂಟಾಗಿದೆ.
ತಿಮಿರಿ ಎಂಬವರ ಮನೆ ರಸ್ತೆಯ ಕೆಳಭಾಗದಲ್ಲಿ ಕೆಸರು ನೀರು ನೇರವಾಗಿ ಇವರ ಮನೆಯ ಅಂಗಳಕ್ಕೆ ಇಳಿಯುತ್ತಿದೆ. ರಸ್ತೆಯ ಅಂಚಿಗೆ ತುಂಬಿಸಲು ಗುತ್ತಿಗೆದಾರರು ತಂದ ಮಣ್ಣನ್ನು ಸೀತು ಎಂಬವರ ಮನೆಗೆ ಹೋಗುವ ರಸ್ತೆಯಲ್ಲಿ ಸುರಿದು ಹೊಗಿದ್ದು ಮಳೆಯಿಂದಾಗಿ ರಸ್ತೆಯೆಲ್ಲಾ ಕೆಸರು ತುಂಬಿ ರಸ್ತೆಯಲ್ಲಿ ನಡೆದು ಹೋಗಲು ಅಸಾಧ್ಯವಾಗಿದೆ. ಕಾಂಕ್ರೀಟಿಕರಣಕ್ಕೆ ಮೊದಲು ಮಳೆ ನೀರು ಹರಿದು ಹೊಗಲು ಚರಂಡಿ ವ್ಯವಸ್ಥೆ ಮತ್ತು ಮೋರಿಗಳನ್ನು ಅಳವಡಿಸದೆ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿದ್ದರಿಂದಾಗಿ ಅಂಬೇಡ್ಕರ್ ಭವನದ ಸಮೀಪ ರಸ್ತೆಯ ಅಡಿಭಾಗದಲ್ಲಿ ನೀರುಹರಿದು ಹೋಗಿ ಮಣ್ಣೂ ಕೊರೆದುದರಿಂದ ಕಾಂಕ್ರೀಟ್ ರಸ್ತೆಯ ಕುಸಿಯುವ ಭೀತಿ ಎದುರಾಗಿದೆ. ಚುಣಾವಣೆಯ ಪೂರ್ವದಲ್ಲಿ ಜನರ ಪ್ರೀತಿಗಳಿಸಲು ಅವೈಜ್ಞಾನಿಕವಾಗಿ ಅಡ್ಡಾದಿಡ್ಡಿ ಕಾಮಗಾರಿ ನಡೆಸಿದ ಪರಿಣಾಮದಿಂದಾಗಿ ಇದೀಗ ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳು ಸಮಸ್ಯೆ ಎದುರಿಸುವಂತಾಗಿದೆ.
