ಉಡುಪಿ: ಕಳೆದ ಬಾರಿಯ ಇಫ್ತಾರ್ ಕೂಟ ಬಹಳ ಚರ್ಚೆಯಾಗಿತ್ತು, ಮೂರ್ತಿ ಇರುವಲ್ಲಿ ಕಾರ್ಯಕ್ರಮ ಆಯೋಜಸಲು ಮುಸಲ್ಮಾನರು ಒಪ್ಪುತ್ತಿಲ್ಲ. ಈ ಹಿನ್ನಲೆಯಲ್ಲಿ ಗೋವಿಂದ ಕಲ್ಯಾಣ ಮಂಟಪದಲ್ಲಿ ಇಫ್ತಾರ್ ಕೂಟ ಆಯೋಜಿಸುವ ಆಲೋಚನೆಯಿದೆ ಎಂದು ಪೇಜಾವರ ಮಠಾಧೀಶ ಶ್ರೀವಿಶ್ವೇಶ ತೀರ್ಥ ಸ್ವಾಮಿಜಿ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಸಲ್ಮಾನ ನಾಯಕರು, ಪ್ರಮುಖರು ಒಪ್ಪಿದರೆ ಕಳೆದ ಬಾರಿಯಂತೆ ಈ ಬಾರಿಯೂ ಇಫ್ತಾರ್ ಕೂಟ ಆಯೋಜಿಸಬೇಕೆಂಬ ಭಾವನೆ ಇದೆ. ಆದರೆ ಈ ಬಾರಿ ಮುಸ್ಲೀಮರು ಇಫ್ತಾರ್ ಕೂಟಕ್ಕೆ ಬಹಳ ಉತ್ಸಾಹ ತೋರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಅಂಬೇಡ್ಕರ್ ವಿರೋಧಿಯಲ್ಲ, ಸಂವಿಧಾನವನ್ನು ಬದಲಿಸಿ ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದು ತಿಳಿಸಿದ ಶ್ರೀಗಳು ಅಲ್ಪಸಂಖ್ಯಾತರನ್ನು ಬಹು ಸಂಖ್ಯಾತರನ್ನು ಸಮಾನವಾಗಿ ಕಾಣಬೇಕು ಎಂದವರು, ದೇಶದಲ್ಲಿ ಎಲ್ಲರಿಗೂ ಒಂದೇ ನ್ಯಾಯ ಇರಬೇಕು, ಶಿಕ್ಷಣ, ಆಹಾರ, ಸರ್ಕಾರದ ಯೋಜನೆ ಎಲ್ಲಾ ಧರ್ಮದ ಬಡವರಿಗೆ ಸಿಗಬೇಕು ಎಂದರು.

