maxresdefault (1)

ಪುತ್ತೂರು: ಕಳೆದ ಕೆಲವು ದಿನಗಳಿಂದ ಸಾಕಷ್ಟು ಮಳೆಯಾಗಿದ್ದು, ಪುತ್ತೂರು ನಗರಕ್ಕೆ ನೀರು ಪೂರೈಸುವ ಉಪ್ಪಿನಂಗಡಿ ನೆಕ್ಕಿಲಾಡಿ ಅಣೆಕಟ್ಟಿನಲ್ಲಿ ನೀರು ಭರ್ತಿಯಾಗಿದ್ದರೂ ಪುತ್ತೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವಲ್ಲಿ ನಗರಸಭೆಗೆ ಹಲವು ದಿನಗಳಿಂದ ಸಮಸ್ಯೆ ಕಾಡುತ್ತಿದೆ.
ನೀರು ಬೇಕಾದಷ್ಟಿದೆ. ವ್ಯವಸ್ಥೆಯೂ ಇದೆ. ಆದರೆ ವಿದ್ಯುತ್ ಸಮಸ್ಯೆ ನಗರಸಭೆಗೆ ತೊಂದರೆ ನೀಡುತ್ತಿದೆ. ಇದೀಗ ಈ ಸಮಸ್ಯೆ ಬಗೆಹರಿಸಿ ಕೊಡುವಂತೆ ಮೆಸ್ಕಾಂನ ಅಧೀಕ್ಷಕ ಅಭಿಯಂತರರಿಗೆ ನಗರಸಭೆ ಮನವಿ ಮಾಡಿದೆ.

ಪುತ್ತೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಉದ್ದೇಶದಿಂದ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯಲ್ಲಿರುವ ಅಣೆಕಟ್ಟು ನಿರ್ಮಾಣ ಮಾಡಲಾಗಿದ್ದು, ಇಲ್ಲಿ ನೀರು ಮೇಲೆತ್ತಿ ನೆಕ್ಕಿಲಾಡಿ ರೇಚಕ ಸ್ಥಾವರದಲ್ಲಿ ಶುದ್ಧೀಕರಿಸಿ ಅಲ್ಲಿಂದ ಪುತ್ತೂರು ನಗರಕ್ಕೆ ಸರಬರಾಜು ಮಾಡುವುದಕ್ಕಾಗಿ ದಶಕದ ಹಿಂದೆ ಎಕ್ಸ್‌ಪ್ರೆಸ್ ಫೀಡರ್ ನಿರ್ಮಿಸಲಾಗಿದೆ.

ನೆಕ್ಕಿಲಾಡಿಯ ಎಚ್‌ಟಿಪಿ೨೩ ಹಾಗೂ ಎಚ್‌ಟಿಪಿ ೧೦ ಸ್ಥಾವರಗಳಿಂದ ಎಕ್ಸ್‌ಪ್ರೆಸ್ ಫೀಡರ್ ಅಳವಡಿಸಲಾಗಿದ್ದು, ಇದರಿಂದ ನಿರಂತರ ನೀರು ಪೂರೈಕೆಗೆ ವಿದ್ಯುತ್ ಬಳಸಿಕೊಳ್ಳಲಾಗುತ್ತದೆ. ಈ ಎಕ್ಸ್‌ಪ್ರೆಸ್ ಫೀಡರ್‌ನಿಂದ ಬೇರೆ ಯಾವುದೇ ಉದ್ದೇಶಕ್ಕೆ ವಿದ್ಯುತ್ ಬಳಸುವಂತಿಲ್ಲ ಎಂಬ ನಿಯಮವಿದೆ. ಆದರೆ ಇದೀಗ ಮೆಸ್ಕಾಂ ಉಪ್ಪಿನಂಗಡಿ, ಕಾಂಚನ ಲೈನ್‌ಗೆ ಸಂಪರ್ಕ ಕಲ್ಪಿಸಿ ಆ ಭಾಗಕ್ಕೆ ವಿದ್ಯುತ್ ಪೂರೈಸುತ್ತಿದೆ ಎಂದು ನಗರಸಭೆ ಆರೋಪಿಸಿದೆ.

ಪ್ರಸ್ತುತ ಕೆಲವು ದಿನಗಳಿಂದ ನೆಕ್ಕಿಲಾಡಿ ಜಲಸ್ಥಾವರಕ್ಕೆ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಈ ಬಗ್ಗೆ ಮೆಸ್ಕಾಂಗೆ ಹಲವು ಬಾರಿ ಮನವಿ ಮಾಡಲಾಗಿದೆ. ಇದರಿಂದಾಗಿ ಪುತ್ತೂರು ನಗರಕ್ಕೆ ನೀರು ಪೂರೈಕೆ ಸಮಸ್ಯೆಯಾಗಿದೆ. ಹೀಗಾಗಿ ನೆಕ್ಕಿಲಾಡಿ ಎಕ್ಸ್‌ಪ್ರೆಸ್ ಫೀಡರ್‌ನಿಂದ ಕೊಟ್ಟಿರುವ ಲೈನ್ ತೆರವು ಮಾಡಿ ನೆಕ್ಕಿಲಾಡಿ ಎಚ್‌ಟಿಪಿ- ೨೩ ಹಾಗೂ ಎಚ್‌ಟಿಪಿ -೧೦ ಸ್ಥಾವರಗಳಿಗೆ ಮಾತ್ರ ಸಂಪರ್ಕ ನೀಡಬೇಕು ಎಂದು ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡ್ ತಮ್ಮ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಪರಿಹಾರಕ್ಕೆ ಮೆಸ್ಕಾಂ ಭರವಸೆ
ಈ ಕುರಿತು ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ನರಸಿಂಹ ಅವರನ್ನು ಸಂಪರ್ಕಿಸಿದಾಗ ನೆಕ್ಕಿಲಾಡಿ ಎಕ್ಸ್‌ಪ್ರೆಸ್ ಫೀಡರ್‌ನಿಂದ ಉಪ್ಪಿನಂಗಡಿ, ಕಾಂಚನ ಲೈನ್‌ಗೆ ಸಂಪರ್ಕ ಪಡೆದಿರುವುದು ನಿಜ. ಮಳೆ ಗಾಳಿಯಿಂದ ವಿದ್ಯುತ್ ಸಮಸ್ಯೆ ಕಾಡಿದ ಈ ವಸತಿ ಪ್ರದೇಶಗಳಿಗೆ ಸಂಪರ್ಕ ಮಡಲಾಗಿದೆ. ಆದರೆ ನೀರು ಪೂರೈಕೆಯ ಎಕ್ಸ್‌ಪ್ರೆಸ್ ಫೀಡರ್ ಲೈನ್‌ನಲ್ಲಿ ಯಾವುದೇ ವಿದ್ಯುತ್ ಕೊರತೆ ಉಂಟಾಗಿಲ್ಲ. ಮೆಸ್ಕಾಂ ಎಂಜಿನಿಯರ್‌ಗಳ ಜತೆ ಸಮಾಲೋಚನೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದ್ದಾರೆ.

 

By suddi9

Leave a Reply

Your email address will not be published. Required fields are marked *