ಸುಳ್ಯ: ಇಲ್ಲಿನ ವಕೀಲ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದ ಬಿ.ಎಸ್.ಶರೀಫ್(48) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶರೀಫ್ ಅವರು ರಂಝಾನ್ ಪ್ರಯುಕ್ತ ಬೆಳಗ್ಗಿನ ಜಾವ ಎದ್ದು ನಮಾಜ್ ಮತ್ತಿತರ ಕಾರ್ಯಕ್ರಮ ಮುಗಿಸಿದ ಬಳಿಕ ಕೋಣೆ ಪ್ರವೇಶಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸುಮಾರು ಎಂಟು ಗಂಟೆಯ ವೇಳೆಗೆ ವಿಷಯ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶರೀಫ್ ವಕೀಲಿ ವೃತ್ತಿಯ ಜತೆಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದು ಸದಾ ಕ್ರೀಯಾಶೀಲರಾಗಿದ್ದರು. ಸುಳ್ಯ ಸಿಟಿ ರೋಟರಿ ಕ್ಲಬ್ ನ ಅಧ್ಯಕ್ಷರಾಗಿದ್ದರು. ಸುಳ್ಯದಲ್ಲಿ ಜೇಸಿ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ತರಬೇತುದಾರರಾಗಿ ನೂರಾರು ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಮೊಗರ್ಪಣೆ ಜುಮಾ ಮಸೀದಿಯ ಉಪಾಧ್ಯಕ್ಷರಾಗಿ, ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆಯ ಸಂಚಾಲಕರಾಗಿ, ಅನ್ಸಾರಿಯಾ ಅನಾಥಾಲಯದ ನಿರ್ದೇಶಕರಾಗಿ, ಟೂಎಇಸ್ಟ್ ಕಾರು ಚಾಲಕ-ಮಾಲಕರ ಸಂಘದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಮೃತರು ತಂದೆ, ತಾಯಿ, ಪತ್ನಿ, ಮೂವರು ಮಕ್ಕಳನ್ನು ಮತ್ತು ಸಹೋದರರನ್ನು ಅಗಲಿದ್ದಾರೆ..

