ಸುಳ್ಯದಲ್ಲಿ ಮಳೆ ಅವಾಂತರ: ದೇವಸ್ಥಾನಕ್ಕೆ ನುಗ್ಗಿದ ನೀರು
ಸುಳ್ಯ: ಕಳೆದ ಎರಡು ದಿನಗಳಲ್ಲಿ ಸುಳ್ಯ ತಾಲ್ಲೂಕಿನಲ್ಲಿ ಮಳೆ ಬಿರುಸುಗೊಂಡಿದೆ. ಗುರುವಾರ ಮಧ್ಯಾಹ್ನದ ಬಳಿಕ ಬಿರುಸುಗೊಂಡ ಮಳೆ ಶುಕ್ರವಾರ ಬೆಳಗ್ಗೆ 11 ಗಂಟೆಯವರೆಗೂ ಸುರಿದಿತ್ತು.
ಬಳಿಕ ಸ್ವಲ್ಪ ಬಿಡುವು ಕೊಟ್ಟಿತು. ಮಧ್ಯಾಹ್ನದ ಬಳಿಕ ಮತ್ತೆ ಮಳೆ ಬಿರುಸುಗೊಂಡಿತು. ಇನ್ನೂ ಹಲವೆಡೆ ನೀರು ನುಗ್ಗಿದ್ದು, ಗಾಳಿ ಮಳೆಗೆ ಕೆಲವು ಕಡೆಗಳಲ್ಲಿ ಮರಗಳು ಬಿದ್ದು ಸಂಚಾರಕ್ಕೆ ತಡೆ ಉಂಟಾಗಿದೆ. ಮನೆ ಕೊಟ್ಟಿಗೆಗಳಿಗೆ ಹಾನಿ ಸಂಭವಿಸಿದೆ. ಶುಕ್ರವಾರ ಬೆಳಗ್ಗಿನ ಜಾವ ಸುಳ್ಯ-ಕೋಲ್ಚಾರ್-ಬಂದಡ್ಕ ರಸ್ತೆಯಲ್ಲಿ ಆಲೆಟ್ಟಿ ಗ್ರಾಮದ ಕುಂಭಕ್ಕೋಡ್ ಎಂಬಲ್ಲಿ ಬೆಳಗ್ಗಿನ ಜಾವ ಬೃಹದಾಕಾರದ ಮರ ಬಿದ್ದು ಸುಮಾರು ಮೂರು ಗಂಟೆಗೂ ಹೆಚ್ಚು ಸಮಯ ರಸ್ತೆ ತಡೆ ಉಂಟಾಯಿತು.
ಬಳಿಕ ಅರಣ್ಯ ಇಲಾಖೆಯ ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ಮತ್ತು ಸಾರ್ವಜನಿಕರು ಕಾರ್ಯಾಚರಣೆ ನಡೆಸಿ ಮರವನ್ನು ತೆರವು ಮಾಡಿದರು.
ಬೆಳ್ಳಾರೆ-ಪೆರುವಾಜೆ ರಸ್ತೆಯಲ್ಲಿ ಗುರುವಾರ ಬೃಹದಾಕಾರದ ಮರ ಬಿದ್ದು ಕೆಲ ಕಾಲ ಸಂಚಾರಕ್ಕೆ ತೊಡಕುಂಟಾಯಿತು. ಗುರುವಾರ ರಾತ್ರಿ ತಡ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಶುಕ್ರವಾರ ಬೆಳಿಗ್ಗಿನ ವೇಳೆಗೆ ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದ ಒಳಗೆ ನೀರು ನುಗ್ಗಿದೆ.