12MNPROTEST

ಬಂಟ್ವಾಳಭಾರೀ ವಿವಾದವಾಗಿದ್ದ ಕಲ್ಲಡ್ಕ ಶಾಲೆಯ ಬಿಸಿಯೂಟ ಪ್ರಕರಣಕ್ಕೆ ಇದೀಗ ಹೊಸ ತಿರುವು ದೊರೆತಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಮಗೂ ಬಿಸಿಯೂಟ ಸೌಲಭ್ಯ ಒದಗಿಸುವಂತೆ ಕಲ್ಲಡ್ಕದ ಶ್ರೀರಾಮ ಹಾಗೂ ಪುಣಚದ ಶ್ರೀದೇವಿ ಶಾಲೆಗಳು ಸರ್ಕಾರಕ್ಕೆ ತನ್ನ ಬೇಡಿಕೆ ಸಲ್ಲಿಸಿದೆ.

ಕಳೆದ ಶೈಕ್ಷಣಿಕ ಅವಧಿಯವರೆಗೆ ಕೊಲ್ಲೂರು ದೇವಸ್ಥಾನದಿಂದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಹಾಗೂ ಪುಣಚದ ಶ್ರೀದೇವಿ ವಿದ್ಯಾಸಂಸ್ಥೆಗಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆಂದು ಸಹಾಯಧನ ನೀಡಲಾಗುತ್ತಿತ್ತು. ಆದರೆ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನದಿಂದ ಮಧ್ಯಾಹ್ನದ ಬಿಸಿಯೂಟಕ್ಕೆ ನಗದು ರೂಪದಲ್ಲಿ ಎರಡು ಶಾಲೆಗಳಿಗೆ ಮಾತ್ರ ನೆರವು ಒದಗಿಸುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಬಿ.ರಮಾನಾಥ ರೈ ಸರ್ಕಾರಕ್ಕೆ ಪತ್ರ ಬರೆದಿದ್ದು, ಬಳಿಕದ ಬೆಳವಣಿಗೆಯಲ್ಲಿ ಈ ಎರಡು ಶಾಲೆಗಳಿಗೆ ಕೊಲ್ಲೂರು ದೇವಸ್ಥಾನದಿಂದ ನೀಡಲಾಗುತ್ತಿದ್ದ ಮಧ್ಯಾಹ್ನದ ಬಿಸಿಯೂಟದ ಅನುದಾನವನ್ನು ಸ್ಥಗಿತಗೊಳಿಸಲಾಗಿತ್ತು.

ಇದಾದ ಬೆನ್ನಲ್ಲೇ ಕಲ್ಲಡ್ಕ ಶಾಲೆಯ ಅನ್ನ ಕಿತ್ತುಕೊಂಡ ಸರ್ಕಾರ ಎಂಬ ಆರೋಪದಡಿಯಲ್ಲಿ ರಾಜ್ಯದ ವಿವಿಧೆಡೆ ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ರೈ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಕಲ್ಲಡ್ಕ ಹಾಗೂ ಪುಣಚ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು, ಪೋಷಕರು ಬಿ.ಸಿ.ರೋಡಿನಲ್ಲಿ ಬೃಹತ್ ಪ್ರತಿಭಟನೆಯನ್ನೂ ನಡೆಸಿದ್ದರು. ಈ ಸಂದರ್ಭ ಶ್ರೀರಾಮ ವಿದ್ಯಾಕೇಂದ್ರದ ಅನುದಾನಿತ ವಿಭಾಗಕ್ಕೆ ಸರ್ಕಾರದ ಅಕ್ಷರದಾಸೋಹದಡಿಯಲ್ಲಿ ಬಿಸಿಯೂಟ ಒದಗಿಸಲು ಅವಕಾಶವಿದ್ದು, ಈ ಕುರಿತಾಗಿ ಮನವಿ ಸಲ್ಲಿಸುವಂತೆ ಜಿ.ಪಂ.ಕಾರ್ಯನಿರ್ವಹಣಾಧಿಕಾರಿ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಯವರು ಶಾಲಾ ಆಡಳಿತ ಮಂಡಳಿಗೆ ನಿರ್ದೇಶನ ನೀಡಿದ್ದರು.

ಆದರೆ ಈ ಸಂಧರ್ಭ “ಸರ್ಕಾರದ ಯಾವುದೇ ನೆರವು ಬೇಡ, ಮಕ್ಕಳ ಪೋಷಕರು, ದಾನಿಗಳು, ಶಿಕ್ಷಣ ಪ್ರೇಮಿಗಳ ನೆರವಿನಿಂದ ಮಕ್ಕಳಿಗೆ ಮಧ್ಯಾಹ್ನದ ಊಟ ಕೊಡುತ್ತೇವೆ ಎಂದು ಶಿಕ್ಷಣ ಇಲಾಖೆಯ ಅಕ್ಷರದಾಸೋಹದ ಬಗ್ಗೆ ನಿರಾಸಕ್ತಿ ತೋರಿದ್ದರು. ಬಳಿಕ ಶಾಲಾ ಜಮೀನಿನಲ್ಲಿ ವ್ಯವಸಾಯ ಮಾಡಿ ಅಕ್ಕಿ ಬೆಳೆದರು, ದಾನಿಗಳ ಬಳಿ ನೆರವು ಕೇಳಿದರು. ಭಿಕ್ಷಾಂದೇಹಿ ಕಾರ್ಯಕ್ರಮದ ಮೂಲಕ ಶಾಲೆಗೆ ಅಕ್ಕಿ ಹಾಗೂ ಇತರ ಸಾಮಾಗ್ರಿಗಳು ಹರಿದು ಬಂತು.

ಈ ನಡುವೆ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಪಕ್ಷವೂ ಅನ್ನ ಕಸಿದ ಸರ್ಕಾರ ಎಂದು ಸಚಿವ ರಮಾನಾಥ ರೈ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಹರಿಸಿತ್ತು. ರೈ ಯವರ ಸೋಲಿನಲ್ಲಿ ಈ ವಿವಾದ ಕೂಡ ಒಂದು ಕಾರಣ ಎಂದು ತಾಲೂಕಿನಲ್ಲಿ ವಿಮರ್ಶೆಯಾಗುತ್ತಿದೆ. ಆದರೆ ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಕಲ್ಲಡ್ಕ ಶ್ರೀ ರಾಮ ಹಾಗೂ ಪುಣಚ ಶ್ರೀದೇವಿ ವಿದ್ಯಾ ಸಂಸ್ಥೆಗಳು ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಅರ್ಜಿ ಸಲ್ಲಿಸಿದ್ದು, ಅಕ್ಷರ ದಾಸೋಹದ ಅಧಿಕಾರಿಗಳು ಅರ್ಜಿ ಸ್ವೀಕರಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದರೂ, ಅನುದಾನಿತದ ವ್ಯಾಪ್ತಿಗೆ ಒಳಪಡುವ ಸುಮಾರು 900ರಷ್ಟು ಮಕ್ಕಳು ಹಾಗೂ ಪುಣಚದಲ್ಲಿ ಸುಮಾರು 100ರಷ್ಟು ಮಕ್ಕಳು ಸರ್ಕಾರದ ಬಿಸಿಯೂಟ ಯೋಜನೆಯ ಫಲಾನುಭವಿಗಳಾಗಲಿದ್ದಾರೆ.

“ಕಲ್ಲಡ್ಕ ಶ್ರೀರಾಮ ಹಾಗೂ ಪುಣಚದ ಶ್ರೀ ದೇವಿ ವಿದ್ಯಾಸಂಸ್ಥೆಗಳಿಗೆ ಬಿಸಿಯೂಟ ಯೋಜನೆಗೆ ಅರ್ಜಿ ಸಲ್ಲಿಸುವಂತೆ ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿಯವರೇ ಪತ್ರ ಬರೆದಿದ್ದರು. ಆದರೆ ಕಳೆದ ಸಾಲಿನಲ್ಲಿ ಸರ್ಕಾರದ ಬಿಸಿಯೂಟ ಯೋಜನೆಯ ಬಗ್ಗೆ ಅವರು ಆಸಕ್ತಿ ತೋರಿಲ್ಲ. ಈ ಬಾರಿ ಬೇಡಿಕೆ ಸಲ್ಲಿಸಿದ್ದಾರೆ. ಅರ್ಜಿ ಸ್ವೀಕರಿಸಿ ಮುಂದಿನ ಕ್ರಮ ಕೈಗೊಂಡಿದ್ದೇವೆ.”

ಶಿವಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ-ಬಂಟ್ವಾಳ

“ಬೇಡಿಕೆಗೆ ಅಗತ್ಯ ಸ್ಪಂದನ ನೀಡಿದೇವೆ, ಮೊದಲ ಹಂತದಲ್ಲಿ ಊಟಕ್ಕೆ ಬೇಕಿರುವ ಅಕ್ಕಿಯನ್ನು ಸರಬರಾಜು ಆಗಿದೆ, ಉಳಿದಂತೆ ಬೇಳೆ, ಎಣ್ಣೆ ಹಾಗೂ ಇತರ ಸಾಮಾಗ್ರಿಗಳ ರವಾನೆ ಆಗಬೇಕಿದೆ.”

ನೋಣಯ್ಯ, ವಿಸ್ತರಣಾಧಿಕಾರಿ, ಅಕ್ಷರದಾಸೋಹ

 

 

By suddi9

Leave a Reply

Your email address will not be published. Required fields are marked *