ವಾಮಂಜೂರು: ಇಲ್ಲಿನ ಚೆಕ್-ಪೋಸ್ಟ್ ಹತ್ತಿರವಿರುವ ತಿರುವೈಲು ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಶಾಲಾ ಪ್ರಾರಂಭೋತ್ಸವದೊಂದಿಗೆ, ಶಾಲಾ ಮಕ್ಕಳ ಅನುಕೂಲಕ್ಕಾಗಿ ‘ಮಿನಿ ಬಸ್’ ಹಸ್ತಾಂತರಿಸಲಾಯಿತು. ತಿರುವೈಲು ವಿದ್ಯಾಬೋಧಿನಿ ಎಜ್ಯುಕೇಶನ್ ಟ್ರಸ್ಟ್ ಈ ಬಸ್ ನಿರ್ವಹಿಸಲಿದೆ.
ಕ್ಷೇತ್ರದ ಶಾಸಕ ಡಾ. ಭರತ್ ಕುಮಾರ್ ಶೆಟ್ಟಿ ಸಮಕ್ಷಮದಲ್ಲಿ ವಾಮಂಜೂರಿನ ಉದ್ಯಮಿ ರಘು ಸಾಲ್ಯಾನರು ಶಾಲೆಗೆ ಮಿನಿ ಬಸ್ ಕೊಡುಗೆಯಾಗಿ ನೀಡಿದರು. ಈ ಸಂದರ್ಭದಲ್ಲಿ ಪತ್ನಿ, ಕಾರ್ಪೊರೇಟರ್ ಹೇಮಲತಾ ಸಾಲ್ಯಾನ್ ಜೊತೆಗಿದ್ದರು. ಶಿಶಿರ್ ಮತ್ತು ಬಳಗ ವಾಮಂಜೂರು ಚೆಂಡೆ ನಿನಾದದೊಂದಿಗೆ ಶಾಲಾ ಮಕ್ಕಳು ಹಾಗೂ ಶಾಸಕ ಭರತ್ ಶೆಟ್ಟಿಗೆ ಸ್ವಾಗತ ಕೋರಲಾಯಿತು.
ಕಾರ್ಯಕ್ರಮದಲ್ಲಿ ಉದ್ಯಮಿ ಸತೀಶ್ ಶೆಟ್ಟಿ ಮೂಡುಜೆಪ್ಪುಗುತ್ತು, ದಿನೇಶ್ ಕರ್ಕೇರ, ಸುಧೀರ್ ನೊರೋನ್ಹಾ, ಶಾಲೆಯ ಮುಖ್ಯೋಪಾಧ್ಯಾಯ ಶಂಕರ್ ಎ, ಎಸ್ಡಿಎಂಸಿ ಅಧ್ಯಕ್ಷ ಜನಾರ್ದನ ಸುವರ್ಣ, ಕಾರ್ಯದರ್ಶಿ ರಾಜೀವ್ ಕೊಳಕೆಬೈಲು, ಕೋಶಾಧಿಕಾರಿ ಶಿವಾನಂದ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಉಮೇಶ್ ಕೋಟ್ಯಾನ್, ಸ್ಟ್ಯಾನಿ ಕುಟಿನ್ಹೋ, ಮೀರಾ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.
“ಶಾಲೆ ಅಲ್ಪ ಅಂತರದಲ್ಲಿದ್ದರೂ ಆಂಗ್ಲ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳು ಶಾಲಾ ಬಸ್ಸುಗಳಲ್ಲಿ ಪ್ರಯಾಣಿಸುವ ವ್ಯವಸ್ಥೆ ಈಗ ಎಲ್ಲೆಡೆ ಇದೆ. ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಈಗಲೂ ಮೈಲುಗಟ್ಟಲೆ ನಡೆದುಕೊಂಡು ಶಾಲೆಗೆ ಹೋಗುತ್ತಾರೆ. ಆದರೆ ಇಲ್ಲಿನ ಶಾಲಾ ಮಕ್ಕಳು ಇನ್ನು ಈ ಮಿನಿ ಬಸ್ಸಿನಲ್ಲಿ ಪ್ರಯಾಣಿಸಬಹುದು. ಜತೆಗೆ ಶಾಲೆಯಲ್ಲಿ ಹಾಜರಾತಿ ಹೆಚ್ಚಿಸುವ ಉದ್ದೇಶವೂ ನಮಗಿದೆ” ಎಂದು ವಾಮಂಜೂರು ಉದ್ಯಮಿ ರಘು ಸಾಲ್ಯಾನ್ ಹೇಳಿದರು.


