ಬೆಳ್ತಂಗಡಿ: ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಮಿನಿ ಇಲ್ಲಿನ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಶಾಸಕ ಹರೀಶ್ ಪೂಂಜ ಮಾತನಾಡಿ, ಅಧಿಕಾರವನ್ನು ಸ್ವೀಕರಿಸಿದ 24 ಗಂಟೆಯೊಳಗೆ ರಾಜ್ಯದ ರೈತರ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿದ್ದ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ದೂರಿದರು.
ಯಡಿಯೂರಪ್ಪ ನುಡಿದಂತೆ ನಡೆದಿದ್ದಾರೆ. ಆದರೆ ಅಧಿಕಾರ ಸಿಗಲಿಲ್ಲ. ಎಚ್ ಡಿಕೆ ಅಧಿಕಾರ ಸಿಕ್ಕಿದ್ದರೂ ರೈತರ ಸಹಕಾರಿ ಸಂಘಗಳಲ್ಲಿ, ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲ ಮನ್ನಾ ಮಾಡಲು ಮೀಣಮೇಷ ಎಣಿಸುತ್ತಿದ್ದಾರೆ ಕಿಡಿಕಾರಿದರು.
ಬಿಜೆಪಿ ರೈತರ ಪರವಾಗಿ, ಅವರ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದೆ. ರೈತರ ಸುಖ ಕಷ್ಟದಲ್ಲಿ ಭಾಗಿಯಾಗಿ ಅವರಿಗೆ ನ್ಯಾಯ ಒದಗಿಸಿಕೊಡಲು ಪ್ರಯತ್ನಿಸಿದೆ. ರೈತರಿಗೆ ನ್ಯಾಯ ಸಿಗುವವರೆಗೂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಿರಂತರ ಹೋರಾಟ ಮಾಡುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಉಪಾಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೆಳಾಲು, ರೈತ ಮೋರ್ಚಾದ ತಾಲೂಕು ಅಧ್ಯಕ್ಷ ದಿನೇಶ ಗೌಡ ಮಲವಂತಿಗೆ, ಜಿ.ಪಂ. ಸದಸ್ಯೆ ಮಮತಾ ಶೆಟ್ಟಿ, ತಾ.ಪಂ. ಸದಸ್ಯರಾದ ಶಶಿಧರ ಎಂ., ಸುಧಾಕರ ಬಿ.ಎಲ್., ಲಕ್ಷ್ಮೀನಾರಾಯಣ, ವಿವಿಧ ಸಿ.ಎ. ಬ್ಯಾಂಕಿನ ಅಧ್ಯಕ್ಷರುಗಳಾದ ವಸಂತ ಮಜಲು, ರಾಜೀವ ರೈ, ನಾರಾಯಣ ಗೌಡ, ಬಿಜೆಪಿ ಮುಖಂಡರುಗಳಾದ ಪ್ರಸಾದ್ ಕುಮಾರ್, ಪದ್ಮನಾಭ ಅರ್ಕಜೆ, ಬಾಲಕೃಷ್ಣ ಶೆಟ್ಟಿ, ರತ್ನವರ್ಮ ಜೈನ್, ಕೇಶವ ಕನ್ಯಾಡಿ, ನಾರಾಯಣ ಆಚಾರ್, ಪುಷ್ಪಾ ಶೆಟ್ಟಿ, ಹರೀಶ ಸಾಲಿಯಾನ್, ಗಿರೀಶ ಡೋಂಗ್ರೆ, ಸಂತೋಷ್ ಲಾಯಿಲ, ಜಯಂತ್ ಗೌಡ, ರಕ್ಷಿತ್ ಶೆಟ್ಟಿ, ರಾಮ್ ಪ್ರಸಾದ್, ಆನಂದ ಅಡೇಲು, ಜಗದೀಶ್ ಮೊದಲಾದವರು ಇದ್ದರು.

