suprimcourt

ನವದೆಹಲಿ: ಹಿರಿಯ ಶಾಸಕರನ್ನು ನೇಮಕ ಮಾಡದೆ ಕೆ.ಜಿ.ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ.

ಇದರೊಂದಿಗೆ ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ ಅವರ ವಿಶ್ವಾಸ ಮತ ಪ್ರಕ್ರಿಯೆ ಮೇಲ್ವಿಚಾರಣೆಯ ಕಾರ್ಯ ಅಬಾಧಿತವಾಗಿದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಸಿಕ್ರಿ, ಅಶೋಕ್ ಭೂಷಣ್ ಮತ್ತು ಎಸ್.ಎ.ಬೋಬ್ಡೆ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ ಹಂಗಾಮಿ ಸ್ಪೀಕರ್ ಆಗಿ ಕೆ.ಜಿ.ಬೋಪಯ್ಯ ಆಯ್ಕೆ ವಿಚಾರ ಕುರಿತ ಅರ್ಜಿ ವಿಚಾರಣೆ ನಡೆಸಿದರು.

ಕರ್ನಾಟಕ ರಾಜ್ಯಪಾಲರ ಆದೇಶವನ್ನು ನಾವು ಪರಿಶೀಲನೆ ಮಾಡಿದರೆ ನಾವು ನಿನ್ನೆ ನೀಡಿದ್ದ ತೀರ್ಪಿಗೆ ವಿರುದ್ದವಾಗುತ್ತದೆ. ನಾವು ಹಂಗಾಮಿ ಸ್ಪೀಕರ್ ಅವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಾಗುತ್ತದೆ. ಅವರ ವಿಚಾರಣೆ ನಡೆಸದೆ ನಾವು ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಬೋಬ್ಡೆ ಹೇಳಿದರು.

ಹಂಗಾಮಿ ಸ್ಪೀಕರ್ ಅವರ ನೇಮಕವನ್ನು ಅನರ್ಹಗೊಳಿಸಿದರೆ ವಿಶ್ವಾಸಮತ ಮೇಲ್ವಿಚಾರಣೆ ಪ್ರಕ್ರಿಯೆ ನಡೆಸುವವರು ಯಾರು ಎಂದು ಅವರು ಪ್ರಶ್ನಿಸಿದರು. ಕಾಂಗ್ರೆಸ್ ಸಲ್ಲಿಸಿರುವ ಅರ್ಜಿ ಮತ್ತು ಈಗ ಮಂಡಿಸಿರುವ ವಾದದಲ್ಲೇ ಗೊಂದಲವಿದೆ ಎಂದು ಹೇಳಿದ ತ್ರಿಸದಸ್ಯ ಪೀಠವು ಬೋಪಯ್ಯ ಆಯ್ಕೆ ಕುರಿತು ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸುವ ಮೂಲಕ ಅವರನ್ನೇ ಹಂಗಾಮಿ ಸ್ಪೀಕರ್ ಆಗಿ ಮುಂದುವರೆಯಲು ಹಾದಿ ಸುಗಮಗೊಳಿಸಿತು.

ಇದಕ್ಕೂ ಮುನ್ನ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಕಾಂಗ್ರೆಸ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಹಂಗಾಮಿ ಸ್ಪೀಕರ್ ಆಗಿ ಬೋಪಯ್ಯ ಅವರನ್ನು ನೇಮಕ ಮಾಡಿರುವುದು ಸರಿಯಲ್ಲ ಎಂದು ಪ್ರತಿಪಾದಿಸಿದರು. ಬಹುಮತ ಸಾಬೀತು ಅಥವಾ ವಿಶ್ವಾಸ ಮತ ವೇಳೆ ವಿಧಾನಸಭೆಯಲ್ಲಿ ಅದರ ಮೇಲ್ವಿಚಾರಣೆ ನಿರ್ವಹಿಸಲು ಹಿರಿಯ ಶಾಸಕರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡುವುದು ಸಂಪ್ರದಾಯ. ಆದರೆ ಬೋಪಯ್ಯ ಅವರು ಕಿರಿಯ ಶಾಸಕರು. ಹೀಗಾಗಿ ಅವರ ನೇಮಕ ಸಮಂಜಸವಾಗಿಲ್ಲ ಎಂದು ಸಿಬಲ್ ವಾದಿಸಿದರು.

ಬೋಪಯ್ಯ ಅವರ ಟ್ರಾಕ್ ರೆಕಾರ್ಡ್ ಸರಿಯಿಲ್ಲ. ಅವರ ವಿರುದ್ಧ ಈ ಹಿಂದೆ ಮಾನ್ಯ ಸುಪ್ರೀಂಕೋರ್ಟ್ ಆದೇಶ ನೀಡಿತ್ತು ಎಂಬ ಅಂಶವನ್ನು ಅವರು ಉಲ್ಲೇಖಿಸಿದರು. ಬೋಪಯ್ಯ ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸುವುದು ಸರಿ. ಆದರೆ ವಿಶ್ವಾಸ ಮತ ಮೇಲ್ವಿಚಾರಣೆ ನೋಡಿಕೊಳ್ಳುವುದಕ್ಕೆ ಅವರು ಸೂಕ್ತವಾದ ಆಯ್ಕೆ ಅಲ್ಲ ಎಂದು ಸಿಬಲ್ ಪ್ರತಿಪಾದಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಪರ ಹಿರಿಯ ವಕೀಲ ಮುಕುಲ್ ರೋಹ್ಟಗಿ ಕೆಲವು ಸಂದರ್ಭಗಳಲ್ಲಿ ಕಿರಿಯ ಶಾಸಕರನ್ನು ಹಂಗಾಮಿ ಸ್ಪೀಕರ್ ಆಗಿ ಆಯ್ಕೆ ಮಾಡಿರುವ ಉದಾಹರಣೆಯಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ರೋಹ್ಟಗಿ ಮತ್ತು ಮುಕುಲ್ ಸಿಬಲ್ ನಡುವೆ ವಾದ, ಪ್ರತಿವಾದ ನಡೆಯಿತು.

ನ್ಯಾಯಮೂರ್ತಿ ಬೋಬ್ಡೆ ಮಾತನಾಡಿ, ಕೆಲವೊಮ್ಮೆ ಹಿರಿಯ ಸದಸ್ಯರನ್ನು ನೇಮಕ ಮಾಡಲಾಗಿಲ್ಲ. ಹಿರಿತನ ಎಂದರೆ ಹೆಚ್ಚು ವಯಸ್ಸಲ್ಲ. ಹೆಚ್ಚು ಬಾರಿ ಆಯ್ಕೆಯಾದವರು ಎಂದರ್ಥ ಎಂದು ಹೇಳಿದರು. ನ್ಯಾಯಮೂರ್ತಿ ಬೋಬ್ಡೆ ರಾಜಸ್ಥಾನ ವಿಧಾನಸಭೆಯಲ್ಲಿ ನಡೆದ ಪ್ರಕರಣವನ್ನು ಉಲ್ಲೇಖಿಸಿದರು.

ವಿ.ಕೆ.ಪಾಟೀಲ್ ಕಿರಿಯ ಶಾಸಕರಾಗಿದ್ದರು. ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಲಾಗಿತ್ತು ಎಂದು ತಿಳಿಸಿದರು.

 

By suddi9

Leave a Reply

Your email address will not be published. Required fields are marked *