ಮಂಗಳೂರು: ಅಪ್ಪೆ ಟೀಚರ್’ ಅಧ್ಯಾಯ ಕರಾವಳಿಯಲ್ಲಿ ತುಳು ಸಿನೆಮಾ ಇಂಡಸ್ಟ್ರಿಗೆ ಸಾಕಷ್ಟು ಮಾರ್ಕ್ ತರಿಸಿಕೊಡುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ತುಳು ಸಿನೆಮಾ ಇಂಡಸ್ಟ್ರಿಗೆ ಇಲ್ಲಿ ಭವಿಷ್ಯ ಇದೆ ಎಂಬುದು ಪಕ್ಕಾ ಆದಂತಾಗಿದೆ. ಇದೇ ಮೂಡ್ನಲ್ಲಿ ಇನ್ನಷ್ಟು ತುಳು ಸಿನೆಮಾಗಳು ತೆರೆಗೆ ಬರುವ ಕಾತರದಲ್ಲಿವೆ.
ಇಂದಿನಿಂದ ‘ಪೆಟ್ಕಮ್ಮಿ’ ತೆರೆಗೆ ಬರಲಿದ್ದು, ಕೋಸ್ಟಲ್ವುಡ್ನಲ್ಲಿ ಹೊಸ ನಿರೀಕ್ಷೆ ಹುಟ್ಟು ಹಾಕಿದೆ. ಅದಾದ ಬಳಿಕ ಒಂದೊಂದೇ ಸಿನೆಮಾಗಳು ತೆರೆಗೆ ಬರುವ ಧಾವಂತದಲ್ಲಿವೆ. ಯಾವುದೂ ಕೂಡ ಈಗಾಗಲೇ ಡೇಟ್ ಅನೌನ್ಸ್ ಮಾಡಿಲ್ಲ. ಸದ್ಯ ‘ಅಪ್ಪೆ ಟೀಚರ್’ ಕೋಸ್ಟಲ್ವುಡ್ ನಲ್ಲಿ ಸಾಕಷ್ಟು ಮಾರುಕಟ್ಟೆ ಸೃಷ್ಟಿಸಿ, ಹೊರ ಜಿಲ್ಲೆಗಳಿಗೂ ತೆರಳಿದೆ. ಇದೇ ಮಾಡೆಲ್ನಲ್ಲಿ ಹೊಸ ಸಿನೆಮಾಗಳು ಕೂಡ ಮೋಡಿ ಮಾಡಬಹುದು ಎಂಬುದು ಈಗಿನ ಲೆಕ್ಕಾಚಾರ.
1971ರಲ್ಲಿ ‘ಎನ್ನ ತಂಗಡಿ’ ಪ್ರಥಮ ತುಳು ಸಿನೆಮಾವು ಮಂಗಳೂರಿನ ಜ್ಯೋತಿ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿತ್ತು. 2014ರಲ್ಲಿ ಅದೇ ಜ್ಯೋತಿ ಚಿತ್ರಮಂದಿರದಲ್ಲಿ ‘ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ’ ಬಿಡುಗಡೆಗೊಂಡು 50ನೇ ತುಳು ಸಿನೆಮಾವಾಗಿ ದಾಖಲೆ ಮಾಡಿತ್ತು. ಆರಂಭದ 10 ವರ್ಷದ ಅವಧಿಯಲ್ಲಿ 17 ತುಳು ಸಿನೆಮಾಗಳ ಕೊಡುಗೆ ನೀಡಿತು. ಆ ನಂತರ ಸ್ವಲ್ಪ ಆಮೆಗತಿಯಲ್ಲಿ ಸಾಗುತ್ತಾ 20 ವರ್ಷದ ಅವಧಿಯಲ್ಲಿ ಕೇವಲ 15 ಸಿನೆಮಾಗಳು ಮಾತ್ರ ಬಂದಿದ್ದವು. ಬಳಿಕ 5 ವರ್ಷ ಸ್ಥಗಿತಗೊಂಡ ತುಳು ಚಿತ್ರರಂಗ ಮತ್ತೆ 2006ರಲ್ಲಿ ಚೇತರಿಕೆಗೊಂಡು, 2013ರವರೆಗೆ 14 ಸಿನೆಮಾಗಳು ತೆರೆಕಂಡವು. 75ರ ಸಿನೆಮಾವಾಗಿ ‘ಪನೊಡಾ ಬೊಡ್ಚಾ’ ದಾಖಲಾಯಿತು. ವಿಶೇಷವೆಂದರೆ, 50 ಸಿನೆಮಾ ಆಗಬೇಕಾದರೆ 44 ವರ್ಷ ಬೇಕಾಯಿತು. ಆದರೆ, 2- 3 ವರ್ಷಗಳ ಒಳಗೆ ಸುಮಾರು 30ರಷ್ಟು ಸಿನೆಮಾ ಬರುವಂತಾಯಿತು.

