ಮಂಗಳೂರು : ಮಂಗಳೂರು ಉತ್ತರ ಕ್ಷೇತ್ರ ಈ ಬಾರಿ ಬಿಜೆಪಿಗೆ ಸವಾಲಿನ ಕ್ಷೇತ್ರವಾಗಿ ಪರಿಣಮಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಮೊಯಿದ್ದೀನ್ ಬಾವಾ ಇಂದು ಎರಡನೇ ಬಾರಿಗೆ ರಾಜಕೀಯ ಸತ್ವ ಪರೀಕ್ಷೆಗಾಗಿ ಮನಪಾ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಕೊನೆ ಕ್ಷಣದವರೆಗೂ ಮಾಜಿ ಸಚಿವ ಕೃಷ್ಣ ಪಾಲೆಮಾರ್ ಅವರಿಗೆ ಬಿಜೆಪಿ ಟಿಕೆಟ್ ಸಿಗಲಿದೆ ಎಂದು ಅತಿ ವಿಶ್ವಾಸದಲ್ಲಿದ್ದ ಈ ಕ್ಷೇತ್ರದ ಬಿಜೆಪಿ ಕಾರ್ಯಕರ್ತರಿಗೆ ಅಥವಾ ಬೆಂಬಲಿಗರಿಗೆ ಈಗ ತೀವ್ರ ನಿರಾಸೆಯಾಗಿದೆ.
ಬಿಜೆಪಿ ಅಧ್ಯಕ್ಷ ಡಾ. ವೈ ಭರತ್ ಕುಮಾರ್ ಶೆಟ್ಟಿ ಎಂಬ, ಹೆಚ್ಚು ಪರಿಚಿತರಲ್ಲದ ಕಾರ್ಯಕರ್ತರೊಬ್ಬರಿಗೆ ಟಿಕೆಟ್ ನೀಡಿದ್ದು, ಪಾಲೆಮಾರ್ ಗುಂಪಿನಲ್ಲಿ ಅತೃಪ್ತಿಯ ಅಲೆಗೆ ಅಥವಾ ಬಂಡಾಯಕ್ಕೆ ಕಾರಣವಾಗಿದೆ. “ಶೆಟ್ಟಿ ಸಮುದಾಯದ ಓಲೈಕೆಗೆ ಬಿಜೆಪಿ ಮುಂದಾಗಿದೆ’ ಎಂಬ ಅಪಸ್ವರವೂ ಕೇಳಿ ಬಂದಿದೆ.
ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಿದ್ದರೆ ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಯಲೇಬೇಕೆಂದು ಪಾಲೆಮಾರ್ ಬೆಂಬಲಿಗರು ಬೆಂಬಲಿಗರು ಒತ್ತಡ ಹೇರಿದ್ದಾರೆ ಎಂಬುದು ಬಹುತೇಕ ಬೆಂಬಲಿಗರ ಅಭಿಮತವಾಗಿದೆ. `ಬಾವಗೆ ಸೂಕ್ತ ಎದುರಾಳಿ ಡಾ. ಶೆಟ್ಟಿ ಅಲ್ಲ, ಪಾಲೆಮಾರ್’ ಎಂದು ಹೇಳಲೂ ಆ ಬೆಂಬಲಿಗರು ಹಿಂದೆ ಸರಿದಿಲ್ಲ.
2008ರಲ್ಲಿ ಈ ಕ್ಷೇತ್ರದಿಂದ ಬಿಜೆಪಿಯ ಕೃಷ್ಣ ಪಾಲೆಮಾರ್ ಭಾರೀ ಮತಗಳ ಅಂತರದಿಂದ ಗೆದ್ದಿದ್ದರೂ, 2013ರ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಮೊೈದಿನ್ ಬಾವರು 5,573 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು. ಆದರೂ 2018ರ ಅಸೆಂಬ್ಲಿ ಚುನಾವಣೆಯಲ್ಲಿ ಪಾಲೆಮಾರ್ಗೆ ಟಿಕೆಟ್ ನೀಡಬೇಕೆಂದು ಬಿಜೆಪಿಗೆ ಒತ್ತಡವಿತ್ತು. ಅಲ್ಲದೆ, ಸ್ವತಃ ಪಾಲೆಮಾರ್ ಕೂಡ ಟಿಕೆಟಿಗಾಗಿ ಬಿಜೆಪಿ ನಾಯಕತ್ವದ ಕದ ತಟ್ಟಿದ್ದರು. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಪಾಲೆಮಾರ್ ಸದನದಲ್ಲಿ ಬ್ಲ್ಯೂ ಫಿಲ್ಮ್ ವೀಕ್ಷಿಸಿ ಸಚಿವ ಸ್ಥಾನ ಕಳೆದುಕೊಂಡಿರುವ ಕಳಂಕವೇ ಅವರಿಗೆ ಬಿಜೆಪಿ ನಿರಾಕರಣೆಗೆ ಕಾರಣ ಎಂದು ಒಂದು ಮೂಲ ಹೇಳಿದೆ.
ಅತ್ತ ಬಿಜೆಪಿ ಟಿಕೆಟಿಗಾಗಿ ಪೈಪೋಟಿ ನಡೆಸಿದ್ದ ಸತ್ಯಜಿತ್ ಸುರತ್ಕಲ್ ಕೂಡ ಡಾ. ಶೆಟ್ಟಿಗೆ ಟಿಕೆಟು ನೀಡಿದ್ದರಿಂದ ಬೇಸರಗೊಂಡಿದ್ದಾರೆ. ಸದ್ಯ ಈಗ ಪಾಲೆಮಾರ್ ಮತ್ತು ಸತ್ಯಜಿತ್ ಬಣಗಳು ಪ್ರತ್ಯೇಕ ರಹಸ್ಯ ಮಾತುಕತೆಯಲ್ಲಿ ತೊಡಗಿದ್ದು, ಬಂಡಾಯ ಸ್ಫೋಟಗೊಳ್ಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಬಿಲ್ಲವ ಸಮುದಾಯದ ನಾಯಕ ಸತ್ಯಜಿತ್ಗೆ ಬಿಜೆಪಿ ಟಿಕೆಟ್ ನೀಡದೆ ಬಿಲ್ಲವರನ್ನು ವಂಚಿಸಿದೆ ಎಂದವರ ಬೆಂಬಲಿಗರು ಬಾಯಿ ಬಡಿದುಕೊಳ್ಳಲಾರಂಭಿಸಿದ್ದಾರೆ. ಏನೇ ಇದ್ದಾಗಲೂ ಇವರಿಬ್ಬರ ಈ ಬಂಡಾಯ ತೀವ್ರ ಸ್ವರೂಪ ಪಡೆದಲ್ಲಿ ಇದರಿಂದ ಕಾಂಗ್ರೆಸ್ ಅಭ್ಯರ್ಥಿಯ ಹಾದಿ ಇನ್ನಷ್ಟು ಸುಗಮವಾಗಲಿದೆ.
2008ರ ಚುನಾವಣೆಯಲ್ಲಿ ಬಾವರು ಪಾಲೆಮಾರ್ ಎದುರು ಸೋತಿದ್ದು, ಆಗ ಬಿಜೆಪಿ ಅಭ್ಯರ್ಥಿಗೆ 7,0057 ಮತ್ತು ಕಾಂಗ್ರೆಸ್ಸಿಗೆ 55631 ಮತ ಲಭಿಸಿತ್ತು. ಸುರತ್ಕಲ್ ಫಿರ್ಕಾ(ಕಾಟಿಪಳ್ಳ ಒಳಗೊಂಡ) ಮತ್ತು ಗುರುಪುರ ಫಿರ್ಕಾದ(ಗುರುಪುರ, ವಾಮಂಜೂರು, ಅಡ್ಡೂರು ಒಳಗೊಂಡ) ಮತದಾರರೇ ಮಂಗಳೂರು ಉತ್ತರ ಅಸೆಂಬ್ಲಿ ಕ್ಷೇತ್ರ ವ್ಯಾಪ್ತಿಯಲಿದ್ದು, ಇಲ್ಲೇ ಈ ಕ್ಷೇತ್ರ ಅಭ್ಯರ್ಥಿಯ ಭವಿಷ್ಯ ನಿರ್ಧರಿಸಲ್ಪಡುತ್ತದೆ.
ಕಾರ್ಮಿಕ ವರ್ಗವೂ ಈ ಕ್ಷೇತ್ರದಲ್ಲಿ ಹರಡಿಕೊಂಡಿದೆ. ಇವರ ಮತಗಳಿಕೆ ಮೇಲೆ ಕಣ್ಣಿರುವ ಸಿಪಿಐಎಂ ತನ್ನ ಅಭ್ಯರ್ಥಿ ಮುನೀರ್ ಕಾಟಿಪಳ್ಳರನ್ನು ಕಣಕ್ಕಿಳಿಸಿದೆ. ಇವರು ಡಿವೈಎಫ್ಐಯ ರಾಜ್ಯಾಧ್ಯಕ್ಷರಾಗಿದ್ದು, ಮುಂಚೂಣಿ ಯುವ ನಾಯಕರಾಗಿದ್ದಾರೆ.
ಮಂಗಳೂರು ಉತ್ತರ ಕ್ಷೇತ್ರದಲ್ಲಿ ಜನಪ್ರಿಯತೆ ಕಂಡುಕೊಂಡಿರುವ ಬಾವ, ಶಾಸಕರಾಗಿ ಕಳೆದ ವರ್ಷ ಹುಟ್ಟುಹಬ್ಬದ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ತನ್ನ ಭಾವಚಿತ್ರ ಹೊಂದಿರುವ ನೋಟ್ ಪುಸ್ತಕ ಹಂಚಿ, ವಿರೋಧಿಗಳಿಂದ ಆರೋಪಕ್ಕೊಳಗಾಗಿದ್ದರು. ಆದರೆ ಇದರಿಂದ ಬಾವರ ಸಾಧನೆಗೆ ಯಾವುದೇ ಧಕ್ಕೆ ಉಂಟಾಗಿಲ್ಲ ಎಂಬುದು ಈ ಬಾರಿ ಪುನಾ ಹುಟ್ಟುಹಬ್ಬದ ನಿಮಿತ್ತ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಹಂಚಿದ್ದರಿಂದ ವೇದ್ಯವಾಗುತ್ತದೆ.
ಸುರತ್ಕಲ್ನಲ್ಲಿ ದೀಪಕ್ ರಾವ್ ಕೊಲೆ ನಡೆದಾಗ ಬಾವರ ವಿರುದ್ಧ ಬಿಜೆಪಿಗರು `ಜಾತಿ ಹೆಸರೆತ್ತಿ’ ಭಾರೀ ಆರೋಪ ಹೊರಿಸಿದ್ದಾರೆ. ಆದರೆ ಕೊಲೆ ಆರೋಪಿಗಳಿಗೂ ಬಾವರಿಗೂ ಯಾವುದೇ ಸಂಬಂಧವಿಲ್ಲ ಎಂಬುದು ತನಿಖೆಯಿಂದ ವ್ಯಕ್ತವಾದಾಗ ವಿವಾದ ತಣ್ಣಗಾಗಿದೆ. ಕಾಂಗ್ರೆಸ್ಸಿನಲ್ಲಿ ಸದಾ ಅಭಿವೃದ್ಧಿಯೊಂದಿಗೆ ಕ್ಷೇತ್ರದ ಬಹುತೇಕ ಮತದಾರರ ಹತ್ತಿರವಾಗಿರುವ ಬಾವ ಈ ಬಾರಿ ಮತ್ತೊಂದು ಬಾರಿ ಬಿಜೆಪಿಗೆ ಕಠಿಣ ಸವಾಲು ನೀಡಲಿದ್ದಾರೆ ಎಂಬುದು ಕ್ಷೇತ್ರದ ಬಹುತೇಕ ಮತದಾರರ ಅಭಿಮತವಾಗಿದೆ.

