
ಶ್ರೀನಗರ: ಶನಿವಾರ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ನಡೆದಿದ್ದ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀಶ್ರೀ ರವಿ ಶಂಕರ್ ಗುರೂಜಿ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಪ್ರತಿಭಟನೆ ನಡೆದು ‘ಭಾರತ ವಿರೋಧಿ’ ಘೋಷಣೆ ಕೂಗಿರುವ ಘಟನೆ ನಡೆದಿದೆ.
ಶನಿವಾರಜೆಕೆಸಿಸಿ (Jammu Kashmir Coordination Committee) ಸಂಘಟನೆ ‘Paigam-e-Mohabbat’ ಎಂಬ ಹೆಸರಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಬ್ಯಾಂಕ್ಗಳ ಸಾಲಮನ್ನಾ ಹಾಗೂ ಹೋಲಿಗೆ ಯಂತ್ರಗಳನ್ನು ವಿತರಿಸಲಾಗುತ್ತಿದೆ ಅಂತ ಹೇಳಿ, ಆಯೋಜಕರು ಜನರನ್ನು ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದಿದ್ದರು ಎಂದು ಆರೋಪಿಸಲಾಗಿದೆ.
ಹೀಗೆ ಸುಮಾರು ಒಂದು ಸಾವಿರ ಜನರನ್ನು ಕಾರ್ಯಕ್ರಮದಲ್ಲಿ ಸೇರಿಸಿದ್ದರು. ಸೋಪಿಯಾನ್, ಪುಲ್ವಾಮಾ, ಬುದ್ಗಾಮ್ ಜಿಲ್ಲೆಗಳಿಂದಲೂ ಜನ ಕಾರ್ಯಕ್ರಮಕ್ಕೆ ಬಂದಿದ್ದರು ಎಂದು ಹೇಳಲಾಗಿದೆ.
ಆದರೆ, ಕಾರ್ಯಕ್ರಮದಲ್ಲಿ ರವಿ ಶಂಕರ್ ಗುರೂಜಿ ಮಾತನಾಡಲು ಶುರು ಮಾಡುತ್ತಿದ್ದಂತೆ ನೆರೆದಿದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನೇಕರು ಎದ್ದು ನಿಂತು ‘ಭಾರತ ವಿರೋಧಿ’ ಹಾಗೂ ‘ಆಜಾದಿ ಪರ’ ಘೋಷಣೆಗಳನ್ನು ಕೂಗಿದ್ದಾರೆ ಎನ್ನಲಾಗಿದೆ.
ಇದೇ ವೇಳೇ ಘಟನೆ ನಡೆದ ಕೂಡಲೇ ರವಿ ಶಂಕರ್ ಗುರೂಜಿ ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಸ್ಥಳದಿಂದ ಹೊರಟು ಬಂದಿದ್ದಾರೆ. ಜೊತೆಗೆ ಕಾರ್ಯಕ್ರಮದ ನಂತರ ರವಿ ಶಂಕರ್ ಗುರೂಜಿ ನಡೆಸಬೇಕಿದ್ದ ಸುದ್ದಿಗೋಷ್ಠಿ ಕೂಡ ರದ್ದು ಪಡಿಸಲಾಗಿದೆ ಅಂತ ತಿಳಿದು ಬಂದಿದೆ.
