ಬೆಂಗಳೂರು: ಕರ್ನಾಟಕ ರಾಜ್ಯಕ್ಕೆ ರೂಪಿಸಲಾದ ಪ್ರತ್ಯೇಕ ನಾಡಧ್ವಜಕ್ಕೆ ಕನ್ನಡ ಸಂಘಟನೆಗಳು ಒಪ್ಪಿಗೆ ನೀಡಿದೆ.
ಈ ಸಂಬಂಧ ಕನ್ನಡ ಸಂಘಟನೆಗಳೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದರು. ಸಭೆಯಲ್ಲಿ ಡಾ. ರಾಜ್ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಕರವೇ ಅಧ್ಯಕ್ಷ ನಾರಾಯಣಗೌಡ, ಸಾಹಿತಿ ಚಂದ್ರಶೇಖರ್ ಕಂಬಾರ, ಪ್ರೊ. ಜಿ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ಕನ್ನಡಪರ ಸಂಘಟನೆ ಮುಖಂಡರು ಭಾಗಿಯಾಗಿದ್ದಾರೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯಕ್ಕೆ ಪ್ರತ್ಯೇಕ ನಾಡಧ್ವಜ ವಿನ್ಯಾಸಗೊಳಿಸಿ ತಜ್ಞರ ಸಮಿತಿ ಸಲ್ಲಿಸಿರುವ ಶಿಫಾಸರಸಿನಂತೆ ಹೊಸ ಧ್ವಜ ರೂಪಿಸಲಾಗಿದೆ.
ಪ್ರತ್ಯೇಕ ನಾಡಧ್ವಜ ರಚನೆಗೆ ಕೇಂದ್ರದ ಅನುಮತಿ ಅಗತ್ಯ. ಈ ಕಾರಣದಿಂದಾಗಿ ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ಹೊಸ ನಾಡಧ್ವಜದಲ್ಲಿ ಹಳದಿ, ಬಿಳಿ ಮತ್ತು ಕೆಂಪು ಬಣ್ಣದಿಂದ ಕೂಡಿದ್ದು, ಮಧ್ಯದಲ್ಲಿ ಕರ್ನಾಟಕ ಸರಕಾರದ ಲಾಂಛನವಿರುತ್ತದೆ ಎಂದು ಮಾಹಿತಿ ನೀಡಿದರು.
