
ಮೈಸೂರು: ಮಾಯಕೊಂಡ ಶಾಸಕ ಶಿವಮೂರ್ತಿ ನಾಯ್ಕ್ ಪುತ್ರಿ ಕಾಣೆಯಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ದೊರೆತಿದೆ.
ಶಾಸಕರ ಪುತ್ರಿ ಲಕ್ಷ್ಮೀ ಮತ್ತು ಮಾಸ್ತಿಗುಡಿ ಸಿನಿಮಾ ನಿರ್ಮಾಪಕ ಪಿ.ಸುಂದರ್ ಗೌಡ ಪರಸ್ಪರ ಪ್ರೀತಿಸಿ ಗುರುವಾರ ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ವಿವಾಹವಾಗಿದ್ದಾರೆ ಎಂದು ತಿಳಿದು ಬಂದಿದೆ.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ದೇವಾಲಯವೊಂದರಲ್ಲಿ ಸುಂದರ್ ಗೌಡ ಮತ್ತು ಲಕ್ಷ್ಮಿ ನಾಯಕ್ ಮದುವೆಯಾಗಿ ಬಳಿಕ ಈ ಜೋಡಿ ಗೌಪ್ಯ ಸ್ಥಳಕ್ಕೆ ತೆರಳಿದೆ ಎನ್ನಲಾಗುತ್ತಿದೆ.
ನಿನ್ನೆ ಸಂಜೆ ಸುಂದರ್ ಗೌಡ ಸಂಬಂಧಿಕರು ಮೈಸೂರಿನ ಹೊಟೇಲ್ ಒಂದರಲ್ಲಿ ನಾಲ್ಕು ರೂಮುಗಳನ್ನು ಪಡೆದು ತಂಗಿದ್ದು, ಸುದ್ದಿ ತಿಳಿದು ಹೊಟೇಲ್ ಗೆ ಭೇಟಿ ನೀಡಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಯುವತಿ ಹೇಳಿಕೆ ಪಡೆಯುವವರೆಗೂ ಹುಡುಗನ ಸಂಬಂಧಿಕರಿಗೆ ಹೊಟೇಲ್ ಬಿಟ್ಟು ತೆರಳದಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ನವ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಸೆಲ್ಫಿ ವಿಡಿಯೋ ಒಂದನ್ನು ಹರಿಬಿಟ್ಟಿದ್ದು, ಶಾಸಕ ಪುತ್ರಿ ಲಕ್ಷ್ಮೀ ಮಾತನಾಡಿ, ನಾನು ಸ್ವ ಇಚ್ಛೆಯಿಂದ ವಿವಾಹವಾಗಿದ್ದೇನೆ. ಇದರಲ್ಲಿ ಯಾರ ಒತ್ತಡವೂ ಇಲ್ಲ. ನಮ್ಮಿಂದ ಯಾರಿಗೂ ತೊಂದರೆ ಆಗುವುದು ಬೇಡ. ನಾನು ಮತ್ತು ಸುಂದರ ಪರಸ್ಪರ ಪ್ರೀತಿಸಿ ಮದುವೆಯಾಗಿರುವುದಾಗಿ ತಿಳಿಸಿದ್ದಾರೆ.
ತಮ್ಮ ಪುತ್ರಿ ಕಾಣೆಯಾಗಿದ್ದಾಳೆ ಎಂದು ಶಾಸಕ ಶಿವಮೂರ್ತಿ ನಾಯ್ಕ್ ಬೆಂಗಳೂರಿನ ಠಾಣೆಯೊಂದರಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
