ಕಾಸರಗೋಡು: ಆಕಸ್ಮಿಕವಾಗಿ ಬಡ ಕುಟುಂಬದ ಮನೆಯೊಂದಕ್ಕೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಇಲ್ಲಿನ ಬೆಳ್ಳೂರಿನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಬೆಂಕಿಗಾಹುತಿಯಾಗಿರುವ ಮನೆಯನ್ನು ಕಿನ್ನಿಂಗಾರು ಬಳಿಯ ಮಾವಿನ ಹಿತ್ತಿಲು ನಿವಾಸಿ ದಿ. ಚನಿಯ ಎಂಬವರ ಪತ್ನಿ ಕಮಲಾ ಅವರದ್ದು ಎಂದು ಗುರುತಿಸಲಾಗಿದೆ.
ಕಮಲಾ ಅವರಿಗೆ ಸರಕಾರದಿಂದ ಹೊಸ ಮನೆ ಮಂಜೂರಾಗಿದ್ದು, ಮನೆ ನಿರ್ಮಾಣಗೊಳ್ಳುವವರೆಗೆ ತಾತ್ಕಾಲಿಕವಾಗಿ ವಾಸಿಸಲು ಒಂದು ಪುಟ್ಟ ಮನೆ ನಿರ್ಮಿಸಿದ್ದರು. ಆದರೆ ನಿನ್ನೆ ರಾತ್ರಿ ದೀಪದಿಂದ ಬೆಂಕಿ ಎಲ್ಲೆಡೆ ಹರಡಿ ಬೆಂಕಿಗಾಹುತಿಯಾಗಿದೆ. ಅಲ್ಲದೆ,
ಹೊಸ ಮನೆಗೆ ಬೇಕಾಗಿದ್ದ ಪೀಠೋಪಕರಣಗಳ ಸಹಿತ ಮನೆಯ ಅಪಾರ ಸೊತ್ತು ಸುಟ್ಟ ಕರಕಲವಾಗಿದ್ದು, ಸುಮಾರು ಒಂದು ಲಕ್ಷ ರೂ. ಗಿಂತಲೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.

