ಹೊಸದಿಲ್ಲಿ: ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ ಗಾಂಧಿ ಅವರು ಬಹುಶಃ ಪ್ರಧಾನಿ ಮೋದಿ ತಾವು ದೇಶದ ಪ್ರಧಾನ ಮಂತ್ರಿ ಎಂದು ಮರೆತು ಬಿಟ್ಟಿದ್ದಾರೆ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್, ಲೋಕಸಭೆ ಕಲಾಪದಲ್ಲಿ ಚುನಾವಣಾ ಪ್ರಚಾರಗಳಂತೆ ಪ್ರತಿಪಕ್ಷಗಳಿಗೆ ಟೀಕಿಸುವುದನ್ನು ಬಿಟ್ಟು ಪ್ರಧಾನಿ ಮೋದಿ ಕಲಾಪದಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಬಹುಶಃ ಪ್ರಧಾನಿ ಮೋದಿ ತಾವು ದೇಶದ ಪ್ರಧಾನ ಮಂತ್ರಿ ಎಂದು ಮರೆತು ಬಿಟ್ಟಿದ್ದಾರೆ ಎಂದು ತಿರುಗೇಟು ನೀಡಿದರು.
ಒಂದು ಗಂಟೆಗೂ ಹೆಚ್ಚಿನ ಸಮಯ ಮಾತನಾಡಿದ ಪ್ರಧಾನಿ ಮೋದಿ ಅವರು ರಫೇಲ್ ಹಗರಣದ ಕುರಿತು ತುಟಿ ಕೂಡ ಬಿಚ್ಚಲಿಲ್ಲ. ರೈತರು ಮತ್ತು ದಿನದಿಂದ ದಿನಕ್ಕೆ ದೇಶದಲ್ಲಿ ಆವರಿಸುತ್ತಿರುವ ನಿರುದ್ಯೋಗ ಸಮಸ್ಯೆಗಳನ್ನು ಅವರು ಮರೆತುಬಿಟ್ಟಿದ್ದಾರೆ. ಲೋಕಸಭೆಯಲ್ಲಿ ಅವರ ಭಾಷಣ ಸಂಪೂರ್ಣ ರಾಜಕೀಯವಾಗಿದೆ ಎಂದು ಹೇಳಿದರು.
ರೈತರು, ಕೃಷಿ ವಲಯದ ಸಮಸ್ಯೆಗಳು, ನಿರುದ್ಯೋಗ ಸೇರಿ, ದೇಶದ ಇತರೆ ಸಮಸ್ಯೆಗಳ ಬಗ್ಗೆ ಚಕಾರ ಎತ್ತದ ಪ್ರಧಾನಿ ಮೋದಿ, ಲೋಕಸಭೆಯಲ್ಲಿ ಬಿಜೆಪಿ ಪರ ಪ್ರಚಾರ ಭಾಷಣ ಮಾಡಿದ್ದಾರೆ. ದೇಶದ ಪ್ರಧಾನಿ ಎಂಬುದನ್ನು ಮರೆತು ಮಾತನಾಡಿದ್ದಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.

