ಬೆಂಗಳೂರು: ಫೆ. 1ರಂದು ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ಮಾಡುವ ಮೂಲಕ ರಾಹುಲ್ ಗಾಂಧಿ ಪ್ರವಾಸ ಆರಂಭವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಫೆಬ್ರುವರಿ 10ರಿಂದ ಎರಡು ದಿನ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಹೈದ್ರಾಬಾದ್ ಕರ್ನಾಟಕ ಪ್ರದೇಶದ ಕೆಲ ಜಿಲ್ಲೆಗಳಿಗೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ ಎಂದಿದ್ದಾರೆ.
ಕೊಪ್ಪಳ, ಯಾದಗಿರಿ, ರಾಯಚೂರು, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅವರು ಪ್ರವಾಸ ಕೈಗೊಳ್ಳಲಿದ್ದು, ಸಾರ್ವಜನಿಕ ಸಭೆ ಹೊರತುಪಡಿಸಿ ಕೊಪ್ಪಳ ಜಿಲ್ಲೆಯ ಹುಲಿಗಮ್ಮ ದೇವಸ್ಥಾನ, ಹಾಗೂ ಗವಿ ಸಿದ್ದೇಶ್ವರ ಮಠ, ಕಲಬುರಗಿಯ ಖ್ವಾಜಾ ಬಂಡೇ ನವಾಜ್ ದರ್ಗಾಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿ ಬಳಿಕ ಫೆ.12ಕ್ಕೆ ಹಿಂದಿರುಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

