ದಾವೋಸ್: ಜಗತ್ತು ಸದ್ಯದ ಸ್ಥಿತಿಯಲ್ಲಿ ಶಾಂತಿ ಸ್ಥಿರತೆ ಸುರಕ್ಷತೆ ವಿಷಯದಲ್ಲಿ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಇದಕ್ಕಾಗಿ ಜಾಗತಿಕ ಒಗ್ಗಟ್ಟು ಅಗತ್ಯವಾಗಿದೆ ಎಂಬುದು ಮನವರಿಕೆಯಾಗಬೇಕು. ಭಯೋತ್ಪಾದನೆ ಎಂದರೆ ಕೆಟ್ಟದ್ದು ಎಂದು ಅರಿಯುವ ಜೊತೆಗೆ ಒಳ್ಳೆಯ ಮತ್ತು ಕೆಟ್ಟ ಭಯೋತ್ಪಾದನೆ ಎಂದು ವರ್ಗೀಕರಣ ಮಾಡುವುದನ್ನು ಬಿಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದರು.
ಸ್ವಿಡ್ಜರ್ ಲ್ಯಾಂಡಿನ ದಾವೋಸ್ ನಲ್ಲಿ 48 ನೇ ವಿಶ್ವ ಆರ್ಥಿಕ ಸಮ್ಮೇಳನವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
20 ವರ್ಷದ ಹಿಂದೆ ಭಾರತದ ಜಿಡಿಪಿ 400 ಬಿಲಿಯನ್ ಡಾಲರ್ ಗಿಂತಲೂ ಕಡಿಮೆ ಇತ್ತು, ಆದರೆ ಈಗ ಭಾರತದ ಜಿಡಿಪಿ ಈಗ 6 ಪಟ್ಟು ಹೆಚ್ಚಿದೆ ಎಂದು ಹೇಳಿದ ಪ್ರಧಾನಿ ಮೋದಿ, ದಾವೋಸ್ ನಲ್ಲಿ ಈ ಹಿಂದೆ ನಡೆದ ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಭಾರತದ ಅಂದಿನ ಪ್ರಧಾನಿ ಹೆಚ್ ಡಿ ದೇವೇಗೌಡರು ಭಾಗವಹಿಸಿದ್ದರು. ಆದರೆ ತಂತ್ರಜ್ಞಾನದಿಂದಾಗಿ ಸದ್ಯದ ಜೀವನ ವಿಧಾನ ಬದಲಾಗಿದೆ, ವಿಶ್ವದ ಎದುರು ಈಗ ಶಾಂತಿ ಸ್ಥಿರತೆ ಸುರಕ್ಷತೆ ಬಹುದೊಡ್ಡ ಸವಾಲುಗಳಾಗಿವೆ ಎಂದು ಪ್ರಧಾನಿ ಮೋದಿ ಹೇಳಿದರು.
ಜಾಗತಿಕ ತಾಪಮಾನ, ಜಾಗತಿಕ ಭಯೋತ್ಪಾದನೆ ಜಗತ್ತಿನ ಮುಂದಿರುವ ಬಹುದೊಡ್ಡ ಅಪಾಯಗಳು. ಈ ಅಪಾಯಗಳನ್ನು ತಡೆಗಟ್ಟಲು 21 ನೇ ಶತಮಾನದಲ್ಲಿ ಜಾಗತಿಕ ಒಗ್ಗಟ್ಟು ಅಗತ್ಯವಾಗಿದೆ ಎಂದು ಅವರು ಹೇಳಿದರು.

