ಮುಂಬಯಿ: ಕೊಂಕಣಿ ತ್ರಿವೇಣಿ ಕಲಾ ಸಂಗಮ್ ಮುಂಬಯಿ ಸಂಸ್ಥೆವತಿಯಿಂದ ಜ.27ರಂದು ದಾದರ್ ಪೂರ್ವದ ಸ್ವಾಮಿ ನಾರಾಯಣ ಮಂದಿರದ ಯೋಗಿ ಸಭಾಗೃಹದಲ್ಲಿ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ್ ವಡೆಯರ್ ಸ್ವಾಮೀಜಿ ಹಾಗೂ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರ ದಿವ್ಯೋಪಸ್ಥಿತಿಯಲ್ಲಿ “ಕೊಂಕಣಿ ಉತ್ಸವ 2018” ನಡೆಯಲಿದೆ ಎಂದು ತ್ರಿವೇಣಿ ಸಂಗಮ್‍ನ ಅಧ್ಯಕ್ಷ ಉಲ್ಲಾಸ್ ಡಿ.ಕಾಮತ್ ತಿಳಿಸಿದ್ದಾರೆ.
ಇಲ್ಲಿನ ಕೊಹಿನೂರು ಹೊಟೇಲ್ ಸಭಾಗೃಹದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಶ್ರೀಮದ್ ವಿದ್ಯಾಧಿರಾಜ ತೀರ್ಥರ ಸನ್ಯಾಸ ದೀಕ್ಷಾ ಸುವರ್ಣೋತ್ಸವ ಹಾಗೂ ಗೌರವ ವಂದನೆ ನಡೆಸಲಾಗುವುದು. ಆ ಪ್ರಯುಕ್ತ ಅಂದು ಅಪರಾಹ್ನ 3.00 ಗಂಟೆಗೆ ವಡಲಾ ಅಲ್ಲಿನ ರಾಮಮಂದಿರದಿಂದ ಭವ್ಯ ಶೋಭಾಯಾತ್ರೆ ಮೂಲಕ ಯತಿವರ್ಯರನ್ನು ಸಭಾಂಗಣಕ್ಕೆ ವೇದಘೋಷಗಳೊಂದಿಗೆ ಬರಮಾಡಿ ಕೊಳ್ಳಲಾಗುವುದು. ಬಳಿಕ ಪಾದಪೂಜೆ, ಗೌರವ ವಂದನೆ, ಆಶೀರ್ವಚನ, ಅಶೋಕ್ ಪಟ್ಕಿ ಬಳಗದಿಂದ ಸಂಗೀತ ಸಂಧ್ಯಾ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗೌರವ ಕಾರ್ಯದರ್ಶಿ ಮುಕುಂದ್ ವೈ. ಕಾಮತ್, ಪ್ರಕಾಶ್ ಭಟ್, ಉಮೇಶ್ ಪೈ, ಕಿರಣ್ ಕಾಮತ್ ಮತ್ತು ಸಚಿನ್ ಕಾಮತ್ ಉಪಸ್ಥಿತರಿದ್ದರು.

