ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಸವಿತಾ ಸಮಾಜ, ಮಂಗಳೂರು ಹಾಗೂ ಸವಿತಾ ಸೌಹಾರ್ದ ಸಹಕಾರಿ ನಿಯಮಿತ, ಬಿ.ಸಿ.ರೋಡ್, ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಸವಿತಾ ಸಮಾಜ ಸಂಘಟನೆಯನ್ನು ಸಂಘಟಿಸಿದವರಲ್ಲೋರ್ವರಾದ ದಿವಂಗತ ವಿಠಲ ಭಂಡಾರಿ ಇವರ ಸಂಸ್ಮರಣಾ ಕಾರ್ಯಕ್ರಮವು ಇತ್ತೀಚೆಗೆ ಡಾ.ಬಿ.ಶ್ರೀನಿವಾಸ ರಾವ್ ಸಭಾಂಗಣ, ಬಿ.ಸಿ.ರೋಡ್ನಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಆನಂಡ ಭಂಡಾರಿ ಗುಂಡದಡೆ, ಅಧ್ಯಕ್ಷರು, ದ.ಕ. ಜಿಲ್ಲಾ ಸವಿತಾ ಸಮಾಜ ಇವರು ವಹಿಸಿದ್ದರು. ದಿವಂಗತ ವಿಠಲ ಭಂಡಾರಿಯವರ ಧರ್ಮಪತ್ನಿ ಭವಾನಿ ಉಪಸ್ಥಿತರಿದ್ದರು ಸಂಸ್ಮರಣೆ ಭಾಷಣವನ್ನು ಕುಶಾಲ್ ನಾಜೂಕ್ ಸುರತ್ಕಲ್ ನೆರವೇರಿಸಿದರು. ಈಗ ಇರುವಂತಹ ಯಾವುದೇ ಸೌಲಭ್ಯಗಳು ಇಲ್ಲದ ಆ ಕಾಲದಲ್ಲಿ ಸಮಾಜದ ಸಂಘಟನೆಗಾಗಿ ಯಾವುದೇ ಫಲಾಪೇಕ್ಷೆಯಿಲ್ಲದೆ ಹಗಲಿರುಳು ದುಡಿದು ಸಮಾಜವನ್ನು ಕಟ್ಟಿದ್ದನ್ನು ನೆನಪಿಸಿಕೊಂಡರು.
ಮಹಾಬಲೇಶ್ವರ ಹೆಬ್ಬಾರ್ ಮೊಡಂಕಾಪು, ನಿವೃತ್ತ ಮುಖ್ಯೋಪಾಧ್ಯಾಯರು ಇವರು ಕುಟುಂಬ ಸಾಮರಸ್ಯದ ಬಗ್ಗೆ ಉಪನ್ಯಾಸಗೈಯ್ಯುತ್ತಾ ಸದ್ಯದ ಪರಿಸ್ಥಿತಿಯಲ್ಲಿ ಯಾಂತ್ರಿಕ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಬಿಡಿಬಿಡಿಯಾಗಿ ವಿವರಿಸುತ್ತ ಪರಿಹಾರೋಪಾಯಗಳನ್ನು ತಿಳಿಸಿದರು. ಸವಿತಾ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷರಾದ ವಿಶ್ವನಾಥ ಸಾಲಿಯಾನ್ ಪ್ರಸ್ತಾಪನೆಗೈದರು. ಉಪಾಧ್ಯಕ್ಷರಾದ ಸುರೇಶ್ ನಂದೊಟ್ಟು ಕಾರ್ಯಕ್ರಮ ನಿರ್ವಹಣೆ ಮಾಡಿದರು.
