ಬಂಟ್ವಾಳ: ತುಳುನಾಡಿನ ಸಾಂಪ್ರದಾಯಿಕ ಕೋಳಿಅಂಕ ನಡೆಸಲು ಅನುಮತಿ ನೀಡುವಂತೆ ಆಗ್ರಹಿಸಿ ತಾ.ಪಂ. ಸದಸ್ಯ ಪ್ರಭಾಕರ ಪ್ರಭು ಕರ್ಪೆ ರಾಜ್ಯದ ಮುಖ್ಯಮಂತ್ರಿಗೆ ಮನವಿ ಪತ್ರ ಬರೆದಿದ್ದಾರೆ.
“ಅವಿಭಜಿತ ದ.ಕನ್ನಡ ಮತ್ತು ಉಡುಪಿ ಜಿಲ್ಲೆಗಳು ತನ್ನದೇ ಆದ ರೀತಿಯ ಪರಂಪರೆ, ವೈಶಿಷ್ಟ್ಯತೆ, ಧಾರ್ಮಿಕ ಕಟ್ಟು ಪಾಡುಗಳಿಂದಾಗಿ ದೇಶ-ವಿದೇಶಗಳಲ್ಲಿ ತುಳುನಾಡು ಎಂದು ಪ್ರಸಿದ್ಧಿಯಾಗಿದ್ದು, ಇಲ್ಲಿ ಜಾತ್ರಾ ಮಹೋತ್ಸವ, ದೈವಗಳ ನೇಮೋತ್ಸವ, ಮಾರಿಪೂಜೆ, ನಾಗಾರಾಧನೆ, ಭೂತದ ಕೋಲ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ತುಳುನಾಡಿನ ಜಾನಪದ ಕಲೆ ಮತ್ತು ಆಚಾರ ವಿಚಾರಗಳಿಗೆ ಒಂದಕ್ಕೊಂದು ಸಂಬಂಧ ಕಲ್ಪಿಸಿಕೊಂಡಿದೆ”.
“ಜಿಲ್ಲೆಯ ಹಲವು ಇತಿಹಾಸ ಪ್ರಸಿದ್ಧ ಪುರಾತನ ದೇವಸ್ಥಾನ, ದೈವಸ್ಥಾನಗಳಲ್ಲಿ ಜಾತ್ರಾ ಮಹೋತ್ಸವಗಳು ಪ್ರಾರಂಭವಾಗುವ ಸಂದರ್ಭ ಧ್ವಜಾರೋಹಣವಾಗುವ ಮುನ್ನ ದೇವಸ್ಥಾನಗಳಿಗೆ ಸಂಬಂಧಿಸಿದ ವ್ಯಾಪ್ತಿಯಲ್ಲಿ ಧಾರ್ಮಿಕವಾಗಿ ನಿರ್ದಿಷ್ಟ ಗೊತ್ತುಪಡಿಸಿದ ಗದ್ದೆಯಲ್ಲಿ 4 ದಿಕ್ಕುಗಳಿಗೆ ಕುಂಟಗಳನ್ನು ಹಾಕಿ ಕೋಳಿಗಳನ್ನು ಕಟ್ಟಿಹಾಕುವ ಮುಖಾಂತರ ಚಾಲನೆ ನೀಡುತ್ತಿರುವುದು ಪುರಾತನ ಕಾಲಾಧಿ ಕಟ್ಟಲೆಗಳಿಂದ ನಡೆದು ಬಂದ ಧಾರ್ಮಿಕ ರೂಢಿಯಾಗಿದೆ. ಈಗಲೂ ಇಂತಹ ಕೋಳಿ ಕಟ್ಟಿ ಹಾಕುವ ಗದ್ದೆಯನ್ನು ತುಳುವಿನಲ್ಲಿ ಕೋಳಿ ಕಟ್ಟುವ ಗದ್ದೆಯೆಂದು ಕರೆಯಲ್ಪಡುತ್ತೇವೆ” ಎಂದು ವಿವರಿಸಿದ್ದಾರೆ.
“ಆದುದರಿಂದ ತುಳುನಾಡಿನ ಧಾರ್ಮಿಕ ನಂಬಿಕೆಗಳಿಗೆ ದಕ್ಕೆಯಾಗದ ರೀತಿಯಲ್ಲಿ ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿನ ಜಾತ್ರಾ ಮಹೋತ್ಸವ ಹಾಗೂ ಇನ್ನಿತರ ಧಾರ್ಮಿಕ ಕಟ್ಟುಪಾಡುಗಳಿಗೆ ಸಂಬಂಧಿಸಿದಂತೆ ಹಗಲಲ್ಲಿ ನಡೆಯುವ ಜೂಜುರಹಿತ ಶಾಂತಿಯುತ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಸರಕಾರದ ವತಿಯಿಂದ ಅನುಮತಿ ನೀಡಬೇಕು ಈ ಬಗ್ಗೆ ತಾವು ಸಂಬಂಧಪಟ್ಟ ಪೋಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕೆಂದು” ಮುಖ್ಯಮಂತ್ರಿಗೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
