ಬಂಟ್ವಾಳ: ಸರಕಾರಕ್ಕೆ ಸುಳ್ಳು ವರದಿ ನೀಡಿ ಬಯಲು ಬಹಿರ್ದೆಸೆ ಮುಕ್ತ ತಾಲೂಕು ಎಂದು ಪ್ರಶಸ್ತಿಯ ಗರಿ ಪಡೆದಿರುವುದು ಯಾವ ನ್ಯಾಯ. ಮೊದಲು ಶೌಚಾಲಯ ನಿರ್ಮಿಸಿ ಆಗ ಪ್ರಶಸ್ತಿ ಸ್ವೀಕರಿಸಿದ್ದಕ್ಕೆ ಗೌರವ ಸಿಕ್ಕಂತಾಗುತ್ತದೆ ಎಂದು ತಾ.ಪಂ. ಸದಸ್ಯ ಉಸ್ಮಾನ್ ಕರೋಪಾಡಿ ಆಗ್ರಹಿಸಿದ್ದಾರೆ.

ಗುರುವಾರ ಎಸ್.ಜಿ.ಆರ್.ಎಸ್.ವೈ ಸಭಾಂಗಣದಲ್ಲಿ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೆರ ಅಧ್ಯಕ್ಷತೆಯಲ್ಲಿ ನಡೆದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರೋಪಾಡಿ ಗ್ರಾಮದಲ್ಲಿ ಸುಮಾರು 15 ಮನೆಗಳಿಗೆ ಶೌಚಾಲಯ ನಿರ್ಮಿಸದೆ, ಇಲ್ಲಿನ ಗಾ.ಪಂ. ಪಿಡಿಒ ಬಯಲು ಬಹಿರ್ದೆಸೆ ಗ್ರಾಮವೆಂದು ಸರಕಾರಕ್ಕೆ ಸುಳ್ಳು ವರದಿಯನ್ನು ನೀಡಿ ಸ್ಚಚ್ಛತಾ ವಿಷಯಕ್ಕೆ ಪ್ರಶಸ್ತಿ ಪಡೆದು ಗ್ರಾಮಸ್ಥರ ಹಾಗೂ ಸರಕಾರವನ್ನು ವಂಚನೆ ಮಾಡಿದ್ದಾರೆಂದು ಆರೋಪಿಸಿದವರು, ಇವರನ್ನು ಕೂಡಲೇ ಹುದ್ದೆಯಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.

ಈ ಬಗ್ಗೆ ಜಿಲ್ಲೆಯ ಸಿಎಸ್ ಮತ್ತು ತಾ.ಪಂ. ಇಒ ಅವರಿಗೆ ದೂರು ನೀಡಿದ್ದು, ಜತೆಗೆ ಮಂಗಳೂರಿನಲ್ಲಿ ಯೋಜನಾ ಸಮಿತಿಯ ಸಭೆಯಲ್ಲೂ ಈ ಪ್ರಸ್ತಾಪವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಎಂದರು.

ತಾ.ಪಂ.ಸದಸ್ಯ ಪ್ರಭಾಕರ ಪ್ರಭು ಮಾತನಾಡಿ, ಮಿನಿ ವಿಧಾನ ಸೌಧ ಉದ್ಘಾಟನೆಗೊಂಡು ತಿಂಗಳು ಕಳೆದರೂ ತಹಶೀಲ್ದಾರರ ಕಚೇರಿಗೆ ನಾಮಫಲಕ ಇಲ್ಲದ್ದರಿಂದ ಸಾಮನ್ಯ ಜನರು ಪ್ರಶ್ನಿಸುವ ಸ್ಥಿತಿ ನಿರ್ಮಾಣವಾಗಿದ್ದು, ಇದಕ್ಕೆ ಸಂಬಂದಪಟ್ಟ ಇಂಜಿನಿಯರ್ ಇಲಾಖೆ ಶೀಘ್ರ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಮೀ ಸಿ.ಬಂಗೇರ, ತಾ.ಪಂ.ಇಒ ಸಿಪ್ರಾಯಾನ್ ಮಿರಾಂ, ಜಿ.ಪಂ.ಸದಸ್ಯರಾದ ರವೀಂದ್ರ ಕಂಬಳಿ, ಮಂಜುಳಾ ಮಾದವ ಮಾವೆ, ಮಮತಾ ಗಟ್ಟಿ ಮತಿತ್ತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *