ಬಂಟ್ವಾಳ:ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದಕ್ಕೆ ರಾಷ್ಟ್ರೀಯ ಸೇವಾ ಯೋಜನೆ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ದೊರೆತು ಬಳಿಕ ವ್ಯಕ್ತಿತ್ವ ವಿಕಸನವೂ ಸಾಧ್ಯವಾಗುತ್ತದೆ ಎಂದು ಬಂಟ್ವಾಳ ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ ಹೇಳಿದರು.ತಾಲ್ಲೂಕಿನ ಪಂಜಿಕಲ್ಲು ಸರ್ಕಾರಿ ಪ್ರೌಢಶಾಲೆಯಲ್ಲಿ ಕಕ್ಯಪದವು ಎಲ್ಸಿಆರ್ ಇಂಡಿಯನ್ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಇದರ ವಾರ್ಷಿಕ ವಿಶೇಷ ಶಿಬಿರದಲ್ಲಿ ಅವರು ಉಪನ್ಯಾಸ ನೀಡಿದರು.
ಸಾಮಾಜಿಕ ಕಾರ್ಯಕರ್ತ ಕಾನ್ಸೆಪ್ಟ್ ವಿನ್ಸೆಂಟ್ ಡೇಸಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಂಗ್ಲಭಾಷಾ ಶಿಕ್ಷಕ ಮಾರ್ಕರ್ ಎ.ಎಫ್.ಪಿಂಟೋ ಪರಿಣಾಮಕಾರಿ ಸಂವಹನ ಬಗ್ಗೆ ಮಾಹಿತಿ ನೀಡಿದರು. ಉದ್ಯಮಿ ಕೇಶವ ಪೂಜಾರಿ , ಮಡಂತ್ಯಾರು ಶಾಲಿನಿ ಸೇವಾ ಪ್ರತಿಷ್ಟಾನ ಸಂಚಾಲಕ ತಾರನಾಥ ಶೆಟ್ಟಿ, ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷ ರಾಜೇಶ ಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ಪ ಕುಲಾಲ್, ಶಿಬಿರಾಧಿಕಾರಿ ಶಿವರಾಜ್ ಗಟ್ಟಿ, ಉಪನ್ಯಾಸಕಿ ದೀಕ್ಷಿತಾ ಮತ್ತು ದಿವ್ಯಶ್ರೀ, ವಿದ್ಯಾರ್ಥಿ ನಾಯಕ ಬಿ.ಮಿಥುನ್ ಕುಮಾರ್, ಸವಿತಾ ರೊಡ್ರಿಗಸ್ ಮತ್ತಿತರರು ಇದ್ದರು. ಇದೇ ವೇಳೆ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
