ಬಂಟ್ವಾಳ: ದೇಶಕ್ಕೆ ಅನ್ನ ಕೊಡುವ ರೈತನಿಗೆ ಬೆಲೆ ಸಿಕ್ಕಾಗ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ. ಈ ಹಿನ್ನೆಲೆಯಲ್ಲಿ ಜನರ ಬಳಿಗೆ ವ್ಯವಸ್ಥೆ ತೆರಳುವ ಪರಿಕಲ್ಪನೆ ಇಂದು ಹೆಚ್ಚು ಜನಪ್ರಿಯವಾಗುತ್ತಿದ್ದು, ಸಹಕಾರಿ ಸಂಘಗಳು ಈ ದಿಸೆಯಲ್ಲಿ ಕಾರ್ಯೋನ್ಮುಖವಾಗಿವೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಲ್ಲಡ್ಕ ಡಾ. ಪ್ರಭಾಕರ ಭಟ್ ಹೇಳಿದರು.
ಬೋಳಂತೂರಿನಲ್ಲಿ ಗುರುವಾರ ಬೆಳಗ್ಗೆ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನೂತನ ಎರಡನೇ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ಜನರಿಗೆ ಸುಲಭವಾಗುವಂತೆ ವ್ಯವಸ್ಥೆಯನ್ನು ಒದಗಿಸಬೇಕು. ರೈತ ಸಶಕ್ತನಾದರೆ ದೇಶ ಸುಭಿಕ್ಷವಾಗಲು ಸಾಧ್ಯ, ಅಂತ್ಯೋದಯದಲ್ಲಿರುವ ಜನಸಾಮಾನ್ಯನಿಗೆ ಯಾವುದೇ ಯೋಜನೆಗಳು ತಲುಪಿದಾಗ ರಾಷ್ಟ್ರದ ಉದ್ದಾರ ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ, ಸಾಲಪತ್ರ ವಿತರಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ, ಸಹಕಾರಿ ಸಂಘಗಳು ಕೇವಲ ಠೇವಣಿ, ಸಾಲ ವಿತರಣೆ ,ವಸೂಲಾತಿಗೆ ಮಾತ್ರ ಸೀಮಿತವಾಗದೆ ಕಷ್ಟ, ಸುಖಗಳಿಗೂ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘ ಶ್ಳಾಘನೀಯ ಸೇವೆ ನೀಡುತ್ತಿದೆ ಎಂದು ಅಭಿನಂದಿಸಿದರು. ಸಂಘವು ಇಟ್ಟಿರುವ ಬೇಡಿಕೆಗೆ ಶೀಘ್ರವಾಗಿ ಸ್ಪಂದಿಸುವ ಭರವಸೆ ನೀಡಿದರಲ್ಲದೆ ಈ ಶಾಖೆ ಐದು ಗ್ರಾಮಗಳಲ್ಲೂ ಶಾಖೆಯನ್ನು ತೆರಯಲಿ ಎಂದು ಅಶಯ ವ್ಯಕ್ತ ಪಡಿಸಿದರು. ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘ ಕ್ಯಾಶ್‍ಲೆಸ್ ವ್ಯವಹಾರ ಮೂಲಕ ಜಿಲ್ಲೆಯಲ್ಲೇ ಗಮನ ಸೆಳೆದಿದೆ. ಈ ಸಂಘದ ಕಂಪ್ಯೂಟರ್ ಖರೀದಿಗೆ 1 ಲಕ್ಷ ರೂವನ್ನು ಡಿಸಿಸಿ ಬ್ಯಾಂಕ್ ನೀಡಲಿದ್ದು, ಸ್ವಸಹಾಯ ಗುಂಪುಗಳ ಪ್ರೇರಕರನ್ನು ಒದಗಿಸುತ್ತೇವೆ. ಹೊಸ ಯೋಜನೆಗಳಿಗೆ ಅಗತ್ಯ ಬೇಡಿಕೆ ಪೂರೈಸಲು ಬದ್ಧ ಎಂದು ರಾಜೇಂದ್ರ ಕುಮಾರ್ ಹೇಳಿದರು.

ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಮಾತನಾಡಿ, ಸಹಕಾರಿ ತತ್ವಗಳಡಿಯಲ್ಲಿ ಬೆಳೆದುಬಂದ ಸಂಘಗಳು ಜನರೊಂದಿಗೆ ಪ್ರಗತಿಶೀಲರಾಗಿ ಮುನ್ನಡೆದಿದೆ ಎಂದರು. ಎಸ್‍ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜಾರಾಮ ಭಟ್, ಟಿ.ಜಿ ಮಾತನಾಡಿ ಕಲ್ಲಡ್ಕ ವ್ಯವಸಾಯ ಸೇವಾ ಸಹಕಾರಿ ಸಂಘ ಜಿಲ್ಲೆಯ ಇತರ ಸಂಘಗಳಿಗೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.
ಬೋಳಂತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಚಂದ್ರಶೇಖರ ರೈ ಮಾತನಾಡಿ, ಗ್ರಾಮದ ಅಭ್ಯುದಯಕ್ಕಾಗಿ ಪಕ್ಷಬೇಧ ಮರೆತು ಕೆಲಸ ಮಾಡಬೇಕು, ಸಂಘದ ಏಳಿಗೆಗೆ ಸರ್ವ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ, ಕಲ್ಲಡ್ಕ ರೈ.ಸೇ.ಸ.ಸ.ನಿ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಕಾರ್ಯ ವ್ಯಾಪ್ತಿಯು ಗೋಳ್ತಮಜಲು, ಅಮ್ಟೂರು , ಬಾಳ್ತಿಲ, ವೀರಕಂಭ, ಬೋಳಂತೂರು ಗ್ರಾಮಗಳು ಸೇರಿದಂತೆ ಒಟ್ಟು 5 ಗ್ರಾಮ ವ್ಯಾಪ್ತಿಯನ್ನು ಒಳಗೊಂಡಿದೆ. ಪ್ರಸ್ತುತ ಪ್ರಧಾನ ಕಛೇರಿಯನ್ನು ಕಲ್ಲಡ್ಕದಲ್ಲಿ ಹಾಗೂ ಶಾಖೆಯನ್ನು ವೀರಕಂಭದಲ್ಲಿ ಹೊಂದಿರುತ್ತದೆ. ಸಂಘದ ಕಾರ್ಯವ್ಯಾಪ್ತಿಯ ಬೋಳಂತೂರು ಗ್ರಾಮದ ಸದಸ್ಯರು ಮತ್ತು ಗ್ರಾಹಕರು ಪ್ರಸ್ತುತ 10 ಕಿ.ಮೀ ದೂರದಿಂದ ಮುಖ್ಯ ಕಚೇರಿ ಕಲ್ಲಡ್ಕ ಮತ್ತು ವೀರಕಂಭ ಶಾಖೆಗೆ ಬಂದು ಬ್ಯಾಂಕಿಂಗ್ ವ್ಯವಹಾರ ಕೃಷಿ ಸಾಲ ಮತ್ತು ಇತರ ದಿನನಿತ್ಯದ ವ್ಯವಹಾರ ನಡೆಸುವರೆ ಕಷ್ಟ ಸಾಧ್ಯವಾಗುವುದರಿಂದ ಬೋಳಂತೂರಿನಲ್ಲಿ ಶಾಖೆ ತೆರೆಯುವುದೆಂದು ಆಡಳಿತ ಮಂಡಳಿಯವರು ನಿರ್ಣಯಿಸಿದೆ ಎಂದರು.
ಮಂಗಳೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಮಂಜುನಾಥ ಸಿಂಗ್, ಎಪಿಎಂಸಿ ಸದಸ್ಯ ನೇಮಿರಾಜ ರೈ, ಬೋಳಂತೂರಿನ ಪ್ರಗತಿಪರ ಕೃಷಿಕ ಮಹಾಬಲ ರೈ, ಬೋಳಂತೂರಿನ ಉದ್ಯಮಿ ಬಿ.ಶಾಂತಾರಾಮ ಶೆಟ್ಟಿ, ಕಟ್ಟಡದ ಮಾಲಿಕ ನಾರಾಯಣ ಟೈಲರ್ ತಾ.ಪಂ.ಸದಸ್ಯ ನಾರಾಯಣ ಕುಲ್ಯಾರ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಕೇಶವ ಕಿಣಿ, ಸಂಘ ಉಪಾಧ್ಯಕ್ಷ ಬಿ. ಸುಧಾಕರ ರೈ, ನಿರ್ದೇಶಕರಾದ ಜಯರಾಮ ರೈ, ಪೂವಪ್ಪ್ಪ ಗೌಡ, ವೆಂಕಟ್ರಾಯ ಪ್ರಭು, ಗೋಪಾಲಕೃಷ್ಣ ಭಟ್, ಗಿರಿಯಪ್ಪ ಗೌಡ, ಲೋಕಾನಂದ, ಕೊರಗಪ್ಪ ನಾೈಕ, ಕಲ್ಲಡ್ಕ ರೈ.ಸೇ.ಸ.ಸ.ನಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ ಕೆ., ಬೋಳಂತೂರು ಶಾಖೆ ವ್ಯವಸ್ಥಾಪಕ ಗೋಪಾಲ ಕೆ. ಉಪಸ್ಥಿತರಿದ್ದರು. ಸಂಘ ಉಪಾಧ್ಯಕ್ಷ ಬಿ.ಸುಧಾಕರ ರೈ ಸ್ವಾಗತಿಸಿದರು. ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ ಸಾಲಪತ್ರ, ಠೇವಣಿಪತ್ರಗಳನ್ನು ವಿತರಿಸಲಾಯಿತು. ಇದೇ ಸಂದರ್ಭ ಅರ್ಹ ಫಲಾನುಭವಿಗಳಿಗೆ ಸಂಘದ ವತಿಯಿಂದ ಉಚಿತ ಕನ್ನಡ ವಿತರಣೆ ನಡೆಯಿತು.
