ಕೈಕಂಬ: ಗುರುಪುರ ಕೈಕಂಬ ಜಂಕ್ಷನಿನ ಎದುರಿರುವ ಗುರುಪುರ ಬ್ಲಾಕ್ ಕಾಂಗ್ರೆಸ್ ಕಚೇರಿ ಬಳಿಯಲ್ಲಿರುವ ಆಳವಾದ ಪಾಳು ಬಾವಿಗೆ ಸೆ. 28ರಂದು ಬೆಳಿಗ್ಗೆ ಬಿದ್ದಿರಬಹುದಾದ ಅಥವಾ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳೀಯ ವಯೋವೃದ್ಧರೊಬ್ಬರ ಶವಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ನಾಗರಿಕರು ಬಾವಿಯಲ್ಲಿ ಕೆಲವು ತಾಸಿಂದ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಆದರೆ ಇದುವರೆಗೆ ಶವ ಪತ್ತೆಯಾಗಿಲ್ಲ.

ಕೈಕಂಬ ಮೆಗಾ ಪ್ಲಾಜಾದ ಹಿಂದುಗಡೆಯ ನಿವಾಸಿ, ಕಾಂಗ್ರೆಸ್ ಹಿರಿಯ ಕಾರ್ಯಕರ್ತ ವಾಸು ಸಫಲಿಗ(89) ಕೆಲವು ದಿನಗಳಿಂದ ಮಾನಸಿಕವಾಗಿ ವ್ಯಥೆಗೊಂಡವರಂತಿದ್ದು, ಸೆ. 28ರಂದು ಬೆಳಿಗ್ಗೆ ನಾಲ್ಕು ಗಂಟೆಯ ಸುಮಾರಿಗೆ ಬೆತ್ತ ಹಿಡಿದುಕೊಂಡು ಮನೆಯಿಂದ ಹೊರಗಡೆ ಹೋಗಿದ್ದರು. ಎಷ್ಟು ಹೊತ್ತಾದರೂ ಅವರು ಮನೆಗೆ ಮರಳದನ್ನು ಗಮನಿಸಿದ ಪುತ್ರಿ ಚಂದ್ರಾವತಿ ಸಹಿತ ನೆರೆಹೊರೆಯವರು ಹುಡುಕಾಟ ಆರಂಭಿಸಿದರೆಂದು ವಾಸು ಅವರ ಮೊಮ್ಮಗ ಶಿವಪ್ರಸಾದ್ ತಿಳಿಸಿದರು.
ಕೈಕಂಬದ ಬಳಿ ಇರುವ ಪಾಳು ಬಾವಿಯ ಹತ್ತಿರ ವಾಸು ಹಿಡಿದುಕೊಂಡಿದ್ದ ಬೆತ್ತ ಪತ್ತೆಯಾಗಿದೆ. ಈ ಸುಳಿವಿನ ಹಿನ್ನೆಲೆಯಲ್ಲಿ ವಾಸು ಬಾವಿಗೆ ಬಿದ್ದಿರಬಹುದು ಅಥವಾ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ನಾಗರಿಕರು ಸಂಶಯ ವ್ಯಕ್ತಪಡಿಸಿದ್ದಾರೆ. ಗಂಜಿಮಠ ಗ್ರಾಪಂ ಸದಸ್ಯ ಬೂಬ, ಗಂಜಿಮಠ ಗ್ರಾ.ಪಂ.ಉಪಾಧ್ಯಕ್ಷ ಜಾಕಿರ್, ಕೆಪಿಸಿಸಿ ಸದಸ್ಯ ಪೃಥ್ವೀರಾಜ್, ಜಿಪಂ ಸದಸ್ಯ ಯು ಪಿ ಇಬ್ರಾಹಿಂ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಕಾರ್ಯಾಚರಣೆಗೆ ಸಹಕಾರ ಮುಂದುವರಿಸಿದ್ದಾರೆ.

ತ್ಯಾಜ್ಯ ತುಂಬಿದ
ಪಾಳು ಬಾವಿ….
ವರ್ಷಗಳಿಂದ ಈ ಬಾವಿ ಆಸುಪಾಸಿನ ಅಂಗಡಿ ವ್ಯಾಪಾರಿಗಳಿಗೆ ತ್ಯಾಜ್ಯ ಎಸೆಯುವ ಗುಂಡಿಯಾಗಿ ಮಾರ್ಪಟ್ಟಿದೆ. ಆಳ ಬಾವಿಯ ಅರ್ಧದಷ್ಟು ಸೀಯಾಳ ಸಿಪ್ಪೆ, ಕಸಕಡ್ಡಿ, ಪ್ಲಾಸ್ಟಿಕ್ ಚೀಲ-ಬಾಟಿಲಿಗಳು ಹಾಗೂ ಇತರ ತ್ಯಾಜ್ಯ ವಸ್ತು ತುಂಬಿದ್ದು, ದುರ್ನಾತ ಬೀರುತ್ತಿದೆ.ಅತಿ ಇಕ್ಕಟ್ಟಾದ ಜಾಗದಲ್ಲಿರುವ ಈ ಬಾವಿಯೊಳಗೆ ಬಿದ್ದಿರಬಹುದಾದ ವಾಸು ಸಫಲಿಗರ ಶವ ಮೇಲೆತ್ತಲು ಅಗ್ನಿಶಾಮಕ ಸಿಬ್ಬಂದಿ ವರ್ಗ ಕ್ರೇನ್ ಬಳಸಿ ವಿಫಲ ಕಾರ್ಯಾಚರಣೆ ನಡೆಸಿದರು. ಬಳಿಕ ಟ್ಯಾಂಕರ್ ಮೂಲಕ ಬಾವಿಗೆ ನೀರು ತುಂಬಿಸಿ, ತ್ಯಾಜ್ಯ ಹೊರತೆಗೆಯಲು ಪ್ರಯತ್ನ ಮುಂದುವರಿಸಿದ್ದಾರೆ. ಸ್ಥಳದಲ್ಲಿ ವಾಸು ಕುಟುಂಬಿಕರು ಹಾಗೂ ಭಾರೀ ಸಂಖ್ಯೆಯ ಕುತೂಹಲಿಗರು ಜಮಾಯಿಸಿದ್ದಾರೆ. ಬಜಪೆ ಪೊಲೀಸರು ಈ ಕಾರ್ಯಾಚರಣೆ ಮೇಲುಸ್ತುವಾರಿ ನೋಡಿಕೊಂಡಿದ್ದಾರೆ.

