ಮುಂಬಯಿ:ಗಣೇಶ ಚತುರ್ಥಿಸಂಭ್ರಮಕ್ಕೆ ವಿಶ್ವಪ್ರಸಿದ್ಧಿಯ ಬೃಹನ್ಮುಂಬಯಿ ಈ ಬಾರಿ ಮತ್ತೆ ವೈವಿಧ್ಯತೆಗಳ ಆಕರ್ಷಣೆಗಳೊಂದಿಗೆ ಗಣೇಶೋತ್ಸವ ಸಂಭ್ರಮಿಸಿ ಇದೀಗಲೇ ಪಂಚದಿನಗಳ ಗಣೇಶ ವಿಸರ್ಜನೆ ನಡೆಸಿದೆ. ಅಂತೆಯೇ ಸದ್ದುಗದ್ದಲಗಳ ಸಂಭ್ರಮದೊಡನೆ ಹನ್ನೊಂದನೇ ದಿನಗಳ ಪೂಜೆಪುರಸ್ಕಾರಗಳೊಂದಿಗೆ ಚೌತಿ ಸಂಭ್ರಮಿಸಿ ರಾಜ್ಯ ಸರಕಾರದ ಸರಕಾರಿ ರಜೆಯೊಂದಿಗೆ ವಿಸರ್ಜಿಸಲಿರುವ ಬಾಣೆತ್ತರಳ ಮಂಡಲಗಳಲ್ಲಿ ಸಾಂಸ್ಕೃತಿಕ ಹಾಗೂ ಧಾರ್ಮಿಕ ವೈವಿಧ್ಯತೆಗಳೊಂದಿಗೆ ಪೂಜಿಸಲ್ಪಟ್ಟು ಇದೇ ಸೆ.05ನೇ ಮಂಗಳವಾರ ಅನಂತ ಚತುರ್ದಶಿ ದಿನ ಜಲಸ್ತಂಬನ ನಡೆಸಲ್ಪಡುವ ಚೆಂಬೂರು ತಿಲಕನಗರದಲ್ಲಿನ ಸಹ್ಯಾದ್ರಿ ಕ್ರೀಡಾ ಮಂಡಲ (ರಿ.) ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಗಣೇಶ ಮಂಡಲದಲ್ಲಿ ಈ ಬಾರಿ ಬಾರೀ ಪ್ರಮಾಣದ ಭಕ್ತರಿಂದ ಪೂಜಿಸಲ್ಪಡುತ್ತಿದೆ.
ಮಹಾನಗರದಲ್ಲಿನ ಭಕ್ತರ ಪಾಲಿಗೆ ಛೋಟಾ ರಾಜನ್ ಗಣೇಶ ಮಂಡಳಿ ಎಂದೇ ಜನಜನಿತ ಈ ಸಹ್ಯಾದ್ರಿ ಕ್ರೀಡಾ ಮಂಡಲವು 2002ನೇ ಇಸವಿಯಲ್ಲಿ ಮೈಸೂರು ಪ್ಯಾಲೇಸ್ ಮಂಡಲ ರಚಿಸಿ ಗಣೇಶೋತ್ಸವ ಸಂಭ್ರಮಿಸಿ ವಿಶೇಷವಾಗಿ ತುಳುಕನ್ನಡಿಗರು ಸೇರಿದಂತೆ ದೇಶವಿದೇಶಗಳ ವಿನಾಯಕ ಭಕ್ತರ ಆಕರ್ಷಣೆ ಪಾತ್ರವಾಗಿ ಬಾರೀ ಜನಸ್ತೋಮ ಆಕರ್ಷಿಸುವಲ್ಲಿ ಯಶ ಕಂಡಿದ್ದು ಅಂತೆಯೇ ಈ ಬಾರಿ 41ನೇ ವಾರ್ಷಿಕ ಗಣಪತಿ ಉತ್ಸವದ ನಿಮಿತ್ತ ಈ ವರ್ಷ ಮಂಡಳದ ಅಧ್ಯಕ್ಷ ರಾಹುಲ್ ಜಿ.ವಾಳಂಜೆ ಅವರ ಕಲ್ಪನೆಯೊಂದಿಗೆ ದೇಶ ಭಕ್ತಿಯನ್ನು ಬಿಂಬಿಸುವ `ಜೈ ಜವಾನ್ ಜೈ ಕಿಸಾನ್ ಜೈ ವಿಜ್ಞಾನ್’ ಧ್ಯೇಯೋದ್ದೇಶದೊಂದಿಗೆ ಗಣೇಶೋತ್ಸವದ ಮಂಡಲ ರಚಿಸಲಾಗಿದೆ. ರಾಷ್ಟ್ರಮಾತೆ, ಸ್ವಚ್ಛ ಭಾರತ್, ರಾಷ್ಟ್ರದ ವೈಜ್ಞಾನಿಕ ಲೋಕಕ್ಕೆ ಅನನ್ಯ ಸೇವೆ ಸಲ್ಲಿಸಿದ ವಿಜ್ಞಾನಿಗಳಾದ ಸರ್ ಸಿ.ವಿ ರಮನ್, ಓಮಿ ಜಹಾಂಗೀರ್ ಬಾಬಾ ಎ.ಪಿ.ಜೆ ಅಬ್ದುಲ್ ಕಲಾಂ, ಜಯಂತ್ ನಾರ್ಲಿಕರ್, ವಿಕ್ರಮ್ ಸರಲ್ ಅವರ ಭಾವಚಿತ್ರಗಳುಳ್ಳ ಬಾಹ್ಯಾಕಾಶ ಪ್ರದರ್ಶಿಸುತ್ತಾ , ಕಾಶ್ಮೀರದಿಂದ ಕನ್ಯಾ ಕುಮಾರಿಯವರೆಗೆ ಪಸರಿಸಿದ ದೇಶದ ವಿವಿಧ ವಾಸ್ತುಶಿಲ್ಪ, ಸಂಸ್ಕೃತಿ, ಗೇಟ್ವೇ ಆಫ್ ಇಂಡಿಯಾ, ಪುಣೆ ಅಲ್ಲಿನ ಶನಿವಾರ್ ಪೇಟ್, ಇಂಡಿಯಾಗೇಟ್, ಮಧುರೆ ಅಲ್ಲಿನ ವಿೂನಾಕ್ಷಿ ಮಂದಿರ, ಕೃಷಿ ಮತ್ತು ಬೇಸಾಯ, ಬ್ರಹ್ಮೋಸ್, ಮಿಸೈಲ್ಗಳು, ರಾಷ್ಟ್ರ ರಕ್ಷಣಾ ಸೇನಾ ಪಡೆ, ಮಹಾನಗರದಲ್ಲಿ ಕಾರ್ಯಪ್ರವೃತ್ತ ಕೊಲಾಬಾ ಬಾಂದ್ರಾ ಸೀಪ್ಝ್ನ ಸಂಚಾರದ ಮೆಟ್ರೋ-3 ಇತ್ಯಾದಿಗಳೊಂದಿಗೆ ರಾಷ್ಟ್ರದ ಉದ್ದಗಳಗಳ ಕೆಲವೊಂದು ಚಿತ್ರಣಗಳಿಂದ ಅತ್ಯಾಕರ್ಷಕವಾಗಿ ರಚಿಸಲ್ಪಟ್ಟಿದೆ.
ರಾಹುಲ್ ವಾಳಂಜೆ ಅವರು ಪ್ರತೀ ವರ್ಷದಂತೆ ತನ್ನ ಕಲ್ಪನೆಯಿಂದ ದೃಶ್ಯದ ಯೋಜನೆಯನ್ನು ಪ್ರಸ್ತುತಿಗೊಳಿಸುತ್ತಿದ್ದು ಈ ಬಾರಿ ಅವರ ಮಾರ್ಗದರ್ಶನದಂತೆ ಈ ಕಲಾತ್ಮಕ ಸನ್ನಿವೇಶಗಳನ್ನು ನಾಡಿನ ಹೆಸರಾಂತ ಕಲಾ ಸಂಯೋಜಕ ಚಿತ್ರಕಾರ ನಿಖಿಲ್ ಮೋರೆ, ಸಂತೋಷ್ ಶೆಲಾರ್, ದಿಲೀಪ್ ಮೈತಿ ಅವರು ಮಂಡಳದ ಸದಸ್ಯರ ಸಹಕಾರದೊಂದಿಗೆ ವಿವಿಧ ಚಿತ್ರಣಗನ್ನು ಪ್ರತ್ಯಕ್ಷವಾಗಿಸಿದ್ದಾರೆ.
ಮಂಡಳದ ಅಧ್ಯಕ್ಷ ರಾಹುಲ್ ವಾಳಂಜೆ ಮತ್ತು ಮನೀಷಾ ವಾಳಂಜೆ, ಉಪಾಧ್ಯಕ್ಷ ಜಯ ಎ.ಶೆಟ್ಟಿ ಮತ್ತು ಛಾಯಾ ಜೆ.ಶೆಟ್ಟಿ, ಕಾರ್ಯದರ್ಶಿ ಅಶೋಕ್ ಸಾತಡೇಕರ್, ಕೋಶಾಧಿಕಾರಿ ರಾಜೇಂದ್ರ ಮೋಹಿತೆ, ಜೊತೆ ಕಾರ್ಯದರ್ಶಿ ಪಾಂಡುರಂಗ ಪಾಟೀಲ್, ಸುಜಾತಾ ಆರ್.ನಿಕಾಳ್ಜೆ ಮತ್ತಿತರರ ಅಪಾರ ಸೇವೆಯೊಂದಿಗೆ ಈ ಬಾರಿ ಗಣಪತಿ ಪ್ರತಿಷ್ಠಾಪನೆ ನಡೆಸಲ್ಪಟ್ಟಿದೆ.
ವರ್ಷಂಪ್ರತಿ ವೈವಿಧ್ಯಮಯ ವಿನ್ಯಾಸಗಳನ್ನು ನಿರ್ಮಿಸಿ ಹೆಗ್ಗಳಿಕೆ ಪಾತ್ರವಾದ ಈ ಮಂಡಲ ಕಳೆದ ವರ್ಷ ಪಾಂಡಾ ವಿಲೇಜ್ನ ನಿರ್ಮಿಸಿ ಮಕ್ಕಳಿಗೆ ವಿಶೇಷ ಅನುಭವ ನೀಡಿತ್ತು. ಕಳೆದ ಮೂರುವರೆ ದಶಕಳಿಂದ ಪುರೋಹಿತ ರಾಮಚಂದ್ರ ವಾಟ್ವೇ ಬದ್ಲಾಪುರ ಇಲ್ಲಿ ಮಹಾಗಣಪತಿಯನ್ನು ಪ್ರತಿಷ್ಠಾಪಿಸಿ ಶಾಸ್ತ್ರೋಕ್ತವಾಗಿ ಪೂಜಾಧಿಗಳನ್ನು ನೆರವೇರಿಸಿ ಬಾಲಿವುಡ್ ತಾರೆಯರನ್ನೊಳಗೊಂಡು ಆಗಮಿಸುತ್ತಿರುವ ಗಣ್ಯಾಧಿಗಣ್ಯರಿಗೆ ಪ್ರಸಾದ ವಿತರಿಸಿ ಹರಸುತ್ತಿದ್ದಾರೆ. ಕಳೆದ ಮಂಗಳವಾರ ಅತೀವೃಷ್ಠಿತಿಯಿಂದಾಗಿ ಮಂಡಲವು ಸ್ಥಳಿಯ ಭಕ್ತರನ್ನೊರತು ಪಡಿಸಿದರೆ ನಿತ್ಯ ಸುಮಾರು ಒಂದುವರೆ ಲಕ್ಷ ಭಕ್ತರ ಆಗಮನ ಆಗುತ್ತಿದೆ ಎಂದು ಉಪಾಧ್ಯಕ್ಷ ಜಯ ಎ.ಶೆಟ್ಟಿ ಅವರು ಈ ಬಾರಿಯ ವೈಶಿಷ್ಟ್ಯತೆ ತಿಳಿಸಿದರು. ಇಂದಿಲ್ಲಿ ಮಧ್ಯಾಹ್ನ ನಡೆಸಲ್ಪಟ್ಟ ಮಹಾರತಿಯಲ್ಲಿ ಮಾಜಿ ಮಿಸ್ಇಂಡಿಯಾ ಆಶಾ ಭಟ್ ಭಾಗವಹಿಸಿ ಗಣಪತಿ ದೇವರನ್ನು ಸ್ತುತಿಸಿದರು.
ಚಿತ್ರ: ರೋನ್ಸ್ ಬಂಟ್ವಾಳ್



