ಬಂಟ್ವಾಳ:ಬಡವರ ಕುರಿತು ಸದಾ ಮಾತನಾಡುವ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ತಮ್ಮ ಬೆಸ್ಟ್ ಇಂಗ್ಳೀಷ್ ಮೀಡಿಯಂ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಸವಾಲೆಸೆದಿದ್ದಾರೆ.ಬುಧವಾರ ಬಿ.ಸಿ.ರೋಡಿನಲ್ಲಿರುವ ಬಿಜೆಪಿ ಕಚೇರಿಯಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕನಿಷ್ಠ ಅವರ ಕಳ್ಳಿಗೆ ಗ್ರಾಮದ ಮಕ್ಕಳಿಗಾದರೂ ಉಚಿತ ಶಿಕ್ಷಣದ ವ್ಯವಸ್ಥೆ ಕಲ್ಲಿಸಬೇಕು,ಅಗ ಅವರಿಗೆ ಸಮಸ್ಯೆಯಾದಲ್ಲಿ ಬಿಜೆಪಿ ಅವರ ನೆರವಿಗೂ ಸಿದ್ದವಿದೆ ಎಂದರು.
* ಜನತಾ ಜನಾರ್ಧನರ ಮೂಲಕ ಭಿಕ್ಷೆ:
ಮಕ್ಕಳ ಅನ್ನಕ್ಕೆ ಕನ್ನ ಹಾಕಿರುವುದು ಸರಸ್ವತಿಯ ತಲೆಗೆ ಹೊಡೆದಂತೆ,ಶೇ.94 ರಷ್ಟು ಮಕ್ಕಳು ಅಹಿಂದ ವರ್ಗಕ್ಕೆ ಸೇರಿದ ಮಕ್ಕಳಿದ್ದಾರೆ.ಇಲ್ಲಿರುವ ಬಡ ಮಕ್ಕಳಿಗೆ ಬಂಟ್ವಾಳ ಬಿಜೆಪಿ ಜನತಾ ಜನಾರ್ಧನರಲ್ಲಿ ಭಿಕ್ಷೆ ಬೇಡಿ ಒಂದು ವರ್ಷದ ಅವಧಿಯವರೆಗೆ ಹೊರಕಾಣಿಕೆಯ ಮೂಲಕ ಅಕ್ಕಿ ಸಹಿತ ಸಾಮಾಗ್ರಿಗಳನ್ನು ನೀಡಲಾಗುವುದು ಎಂದರು
ಕಲ್ಲಡ್ಕ ಪ್ರಭಾಕರ ಭಟ್ ಜೊತೆ ಹೋರಾಡುವುದಿದ್ದರೆ ವೈಚಾರಿಕವಾಗಿ ಮಾಡಿ. ಭಕ್ತರು ಹುಂಡಿಗೆ ಹಾಕಿದ ಹಣವನ್ನು ಶಾಲೆಗೆ ಒದಗಿಸುವುದನ್ನು ನಿಲ್ಲಿಸುವ ಮೂಲಕ ನೀಚತನ, ಸಣ್ಣತನ ತೋರಿಸಬೇಡಿ. ರೈಗಳು ಪೈಪೋಟಿ ನೀಡುವುದಿದ್ದರೆ, ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡಬೇಕೇ ಹೊರತು, ದೇವಸ್ಥಾನ ಕೊಡುವ ಅನುದಾನ ಸ್ಥಗಿತಗೊಳಿಸುವ ಸಣ್ಣತನದ ಕಾರ್ಯಕ್ಕೆ ಇಳಿಯಬಾರದು ಎಂದು ಸವಾಲೆಸೆದರು.
ಕಲ್ಲಡ್ಕ ಶಾಲೆಗೆ ರಿಯಲ್ ಎಸ್ಟೇಟ್ ಹಣ ಬರುತ್ತದೆ ಎಂದು ಸಚಿವರ ಹೇಳಿಕೆಗೆ ಉತ್ತರಿಸಿದ ನಳಿನ್, ರಿಯಲ್ ಎಸ್ಟೇಟ್ ಉದ್ದಿಮೆಗಳಿಂದ ಲಾಭ ಪಡೆಯುವುದಿದ್ದರೆ, ಸರಕಾರದ ಅಧಿಕಾರ ಹೊಂದಿರುವ ಸಚಿವರ ಶಿಕ್ಷಣ ಸಂಸ್ಥೆಗಳಿಗೆ ಜಾಸ್ತಿ ಬರಬೇಕೇ ವಿನ: ಕಲ್ಲಡ್ಕಕ್ಕಲ್ಲ ಎಂದರು.
* ರಾಷ್ಟ್ರಮಟ್ಟದಲ್ಲಿ ಪ್ರಸಿದ್ದಿ:
ಕಲ್ಲಡ್ಕ,ಪುಣಚ ಶಾಲೆಗಳಲ್ಲಿ ಯೋಗ, ಸಂಸ್ಕ್ರತ, ಸಂಸ್ಕಾರವನ್ನು ಕಲಿಸಿಕೊಡುವುದರ ಜೊತೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಪ್ರಸಿದ್ದಿಯನ್ನು ಪಡೆದಿದೆ. ಈ ಶಾಲೆಗಳನ್ನು ಸರಕಾರ ಅಭಿನಂದಿಸಬೇಕಾಗಿತ್ತು.ಸಚಿವ ರಮಾನಾಥ ರೈಅವರು ತನ್ನ ಕ್ಷೇತ್ರದಲ್ಲಿ ಇಂತಹ ಶಾಲೆ ಇರುವ ಬಗ್ಗೆ ಹೆಮ್ಮೆ ಪಡಬೇಕಿತ್ತು.ಆದರೆ ಅವರು ರಾಜಕೀಯ ಹಳದಿ ಕಣ್ಣಿನಿಂದ ನೋಡಿ ಮಕ್ಕಳ ಅನ್ನಕ್ಕೆ ಕನ್ನ ಹಾಕಿರುವುದು ಖಂಡನೀಯವಾಗಿದೆ ಎಂದರು.ಸಿಎಂ ಸಿದ್ದರಾಮಯ್ಯ,ಸಚಿವ ರಮಾನಾಥ ರೈ ಅವರು ತಮ್ಮ ಜೇಬಿನಿಂದ ಹಣವನ್ನು ನೀಡುವುದಲ್ಲ,ದೇವಸ್ಥಾನದ ಹುಂಡಿಗೆ ಭಕ್ತರು ಸಮರ್ಪಿಸಿದ ಹಣದಿಂದ ನೀಡಲಾಗುತ್ತಿದೆ.ದೇವಸ್ಥಾನದ ಹಣ ಪೆÇೀಲಾಗಬಾರೆದಂಬ ಉದ್ದೇಶದಿಂದ ದಿ.ಡಾ.ವಿ.ಎಸ್.ಆಚಾರ್ಯರು ಮುಜರಾಯಿ ಸಚಿವರಾಗಿದ್ದಾಗ ದೇವಸ್ಥಾನದ ಹುಂಡಿ ಹಣ ಶಿಕ್ಷಣ,ಆರೋಗ್ಯ,ಸಾಮಾಜಿಕ ಕಾರ್ಯಗಳಿಗೆ ವಿನಿಯೋಗವಾಗಬೇಕೆಂದು ಕಾನೂನು ರೂಪಿಸಲಾಗಿತ್ತು ಎಂದರು.
* ಉರ್ದು ಶಾಲೆಗೂ ಅನುದಾನ:
ಕಟೀಲು ದೇವಳದಿಂದಲೂ ನಾನಾ ಶಾಲೆಗಳಿಗೆ ಅನುದಾನ ಹೋಗುತ್ತದೆ. ಅದರಲ್ಲಿ ಉರ್ದು ಶಾಲೆಯೂ ಸೇರಿದೆ. ಎಂದಿಗೂ ದೇವಸ್ಥಾನದ ಹಣ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ದೊರಕುವುದಾದರೆ ಅದಕ್ಕೆ ಕಲ್ಲು ಹಾಕುವ ಕೆಲಸವನ್ನು ನಾವು ಮಾಡಿಲ್ಲ ಎಂದು ನಳಿನ್ ಹೇಳಿದರು.
ಕಲ್ಲಡ್ಕದಲ್ಲಿರುವುದು ಪ್ರಭಾಕರ ಭಟ್ ಅವರ ಸ್ವಂತ ಶಿಕ್ಷಣ ಸಂಸ್ಥೆಯೇನಲ್ಲ. ವಿವೇಕಾನಂದ ವಿದ್ಯಾವರ್ಧಕ ಸಂಘ ನಡೆಸುವ 64 ಶಾಲೆಗಳ ಪೈಕಿ ಕಲ್ಲಡ್ಕ ಶ್ರೀರಾಮ ಮತ್ತು ಪುಣಚ ಶ್ರೀದೇವಿ ಶಿಕ್ಷಣ ಸಂಸ್ಥೆಯೂ ಸೇರಿದೆ. ವಿನಾ ಕಾರಣ ಪ್ರಭಾಕರ ಭಟ್ ಅವರನ್ನು ಗುರಿಯಾಗಿಸಿ ಶಾಲೆ ಮೇಲೆ ದಾಳಿ ನಡೆಸಲಾಗುತ್ತಿದೆ. ದೇವಸ್ಥಾನಗಳು ಸಮಾಜ ಚಿಂತನೆಯ ಕಾರ್ಯ ಮಾಡಲು ಪ್ರೇರೇಪಿಸಬೇಕು. ಹಿಂದೆಲ್ಲ ರಾಜ್ಯದ ಸಂರಕ್ಷಣೆಗೂ ದೇವಸ್ಥಾನದ ಹುಂಡಿಯ ಹಣವನ್ನು ಬಳಸಲಾಗುತ್ತಿತ್ತು. ಶಾಲೆ ನಡೆಸುವುದು ಕಷ್ಟದ ಕೆಲಸ, ಕನ್ನಡ ಶಾಲೆಗಳ ಪೈಕಿ, ಶ್ರೀರಾಮ ವಿದ್ಯಾಕೇಂದ್ರ ರಾಜ್ಯದಲ್ಲೇ ಗಮನ ಸೆಳೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕನ್ನಡದಲ್ಲಿ ಸಂಪೂರ್ಣವಾಗಿ ಉಚಿತವಾಗಿ ನೀಡುತ್ತಾ ಗರಿಷ್ಠ ಸಂಖ್ಯೆಯ ಮಕ್ಕಳನ್ನು ಹೊಂದಿರುವ ಶಿಕ್ಷಣ ಸಂಸ್ಥೆಯ ಪೈಕಿ ಕಲ್ಲಡ್ಕ ಶಾಲೆ ಮೇಲ್ಪಂಕ್ತಿಯಲ್ಲಿ ನಿಲ್ಲುತ್ತದೆ. ಆದರೆ ಶಾರದಾದೇವಿ ತಲೆಗೆ ಹೊಡೆಯುವ ಕೆಲಸವನ್ನು ಮಾಡಲಾಗಿದೆ. ರಾಜಕೀಯ ನಡೆಸುವ ಮೂಲಕ ಶಾಲೆ ಮಕ್ಕಳಿಗೆ ಒದಗಿಸುವ ಅನ್ನವನ್ನು ಕಸಿಯುವ ಕೆಲಸ ಮಾಡಲಾಗಿದೆ. ಇದು ಸಚಿವರಿಗೆ ಶೋಭೆ ತರುವ ವಿಚಾರವಲ್ಲ ಎಂದು ನಳಿನ್ ಹೇಳಿದರು.
ಡಾ.ವಿ.ಎಸ್.ಆಚಾರ್ಯ ಮುಜರಾಯಿ ಸಚಿವರಾಗಿದ್ದ ಸಂದರ್ಭ ಶಿಕ್ಷಣ ಸಂಸ್ಥೆಗಳು, ಭಜನಾ ಮಂದಿರ ನವೀಕರಣ, ಧಾರ್ಮಿಕ ಕೇಂದ್ರ ಪುನರುತ್ಥಾನಕ್ಕೆ ದೇವಸ್ಥಾನಗಳ ಹಣ ಬಳಸುವ ಕುರಿತು ಮಾಡಿದ ಪ್ರಸ್ತಾಪವಿದು. ಆ ರೀತಿಯಾಗಿ ಕೊಲ್ಲೂರಿನಿಂದ ನಮ್ಮ ಜಿಲ್ಲೆಯ ಶಾಲೆಗಳಿಗೆ ಹಣ ಬರುತ್ತಿತ್ತು. ಇದು ಯಾರ ಅಪ್ಪನ ಮನೆಯಿಂದ ತರುವುದಲ್ಲ, ಭಕ್ತರು ಹುಂಡಿಗೆ ಹಾಕಿದ ಹಣವನ್ನು ಪ್ರಸಾದರೂಪವಾಗಿ ಕೊಡಲಾಗುತ್ತಿತ್ತು. ಇನ್ನು ಶಾಲೆಗೆ ಹಣ ಕೊಡಿ ಎಂದು ಧಾರ್ಮಿಕ ದತ್ತಿ ಇಲಾಖೆಯನ್ನು ಕೇಳಬೇಡಿ ಎಂದು ಡಾ. ಭಟ್ ಅವರಲ್ಲಿ ಮನವಿ ಮಾಡಿದ್ದೇವೆ. ಏನಿದ್ದರೂ ಜನತಾ ಜನಾರ್ಧನನ ಬಳಿ ಹೋಗಿ ಭಿಕ್ಷೆ ಕೇಳುತ್ತೇವೆ ಎಂದು ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದರು.
* ಸರ್ವೀಸ್ ರಸ್ತೆ:
ಒಟ್ಟು ಮೂರು ಸರ್ವೀಸ್ ರಸ್ತೆಗಳ ಅಭಿವೃದ್ಧಿಗೆ 19 ಕೋಟಿ ರೂ ಅನುದಾನ ಮಂಜೂರುಗೊಂಡಿದೆ. ಅದರಲ್ಲಿ ಬಿ.ಸಿ.ರೋಡ್ ಸರ್ವೀಸ್ ರಸ್ತೆಯೂ ಒಳಗೊಂಡಿದೆ. ಕೆಲ ತಾಂತ್ರಿಕ ಕಾರಣಗಳಿಂದ ರಸ್ತೆ ದುರಸ್ತಿ ಕೆಲಸಕ್ಕೆ ಹಿನ್ನಡೆಯಾಗಿದೆ. ಮಳೆಗಾಲ ಮುಗಿದ ಕೂಡಲೇ ಕಾಮಗಾರಿ ನಡೆಯಲಿದೆ ಎಂದು ನಳಿನ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಶರತ್ ಮಡಿವಾಳ ಹತ್ಯೆ ಹಿಂದಿನ ಶಕ್ತಿಗಳ ಪಾತ್ರಗಳ ಕುರಿತು ತನಿಖೆಯಾಗಲಿ. ನಿರಪರಾಧಿಗಳನ್ನು ಪೊಲೀಸರು ಬಂಧಿಸುವುದಿಲ್ಲ ಎಂಬ ವಿಶ್ವಾಸವಿದೆ. ಹತ್ಯೆ ಆರೋಪಿಗಳನ್ನು ಬಂಧಿಸಿದ ಜಿಲ್ಲಾ ಪೊಲೀಸರಿಗೆ ಅಭಿನಂದಿಸುತ್ತೇನೆ ಎಂದ ನಳಿನ್, ಹತ್ಯೆಗೆ ಸಂಬಂಧಿತ ಎಲ್ಲ ಮಾಹಿತಿಗಳೂ ಹೊರಬರಲಿ ಎಂದು ಆಶಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು, ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಸುಲೋಚನಾ ಜಿ.ಕೆ. ಭಟ್, ದೇವದಾಸ ಶೆಟ್ಟಿ , ಜಿ.ಆನಂದ, ದಿನೇಶ್ ಅಮ್ಟೂರು, ಮೋನಪ್ಪ ದೇವಸ್ಯ, ದಿನೇಶ್ ಭಂಡಾರಿ, ಚೆನ್ನಪ್ಪ ಕೋಟ್ಯಾನ್, ಮೊದಲಾದವರು ಉಪಸ್ಥಿತರಿದ್ದರು.
