ರಾಜ್ಯದಲ್ಲಿ ಎಲ್ಲರಿಗೂ ನಿವೇಶನ ಮತ್ತು ಸೂರು ಒದಗಿಸುವ ನಿಟ್ಟಿನಲ್ಲಿ ಕೆಲವೊಂದು ಕಾಯ್ದೆ ತಿದ್ದುಪಡಿ ಮೂಲಕ ಸರ್ಕಾರಿ ಜಮೀನು ಮಾತ್ರವಲ್ಲದೆ ಗೋಮಾಳ, ಪರಂಬೋಕು ಮತ್ತು ಅರಣ್ಯ ಪ್ರದೇಶದಲ್ಲಿ ಕೂಡಾ ವಾಸವಾಗಿರುವ ಅರ್ಹ ಫಲಾನುಭವಿಗಳಿಗೆ 94 ಸಿ ಮತ್ತು 94ಸಿಸಿ ಯೋಜನೆಯಡಿ ಗರಿಷ್ಟ ಪ್ರಮಾಣದಲ್ಲಿ ಹಕ್ಕುಪತ್ರ ವಿತರಿಸಲಾಗಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದ ಒಟ್ಟು 40 ಗ್ರಾಮ ಪಂಚಾಯಿತಿ ಪೈಕಿ ಈಗಾಗಲೇ ಐದು ಪಂಚಾಯಿತಿ ವ್ಯಾಪ್ತಿಯಲ್ಲಿ ಸಲ್ಲಿಕೆಯಾದ ಸುಮಾರು 350ಕ್ಕೂ ಮಿಕ್ಕಿ ಅರ್ಜಿಗಳ ಪೈಕಿ ಕೇವಲ 35 ಫಲಾನುಭವಿಗಳಿಗೆ ಮಾತ್ರ ಹಕ್ಕುಪತ್ರ ನೀಡಲು ಸಾಧ್ಯವಾಗಿಲ್ಲ. ಉಳಿದಂತೆ ಎಲ್ಲರಿಗೂ ಹಕ್ಕುತ್ರ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಶೇ.100ರಷ್ಟು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸುವ ಗುರಿ ಕಂದಾಯ ಇಲಾಖೆ ಹೊಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ. ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಸಂಜೆ ಅರ್ಹ ಫಲಾನುಭವಿಗಳಿಗೆ ರಾಷ್ಟ್ರೀಯ ಕುಟುಂಬ ಸಹಾಯಧನ ಮತ್ತು 94ಸಿ ಮತ್ತಿತರ ಹಕ್ಕು ಪತ್ರ ವಿತರಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಭೂ ಮಸೂದೆ ಕಾಯ್ದೆ ಬಳಿಕ ಬಡವ ಮತ್ತು ಕೃಷಿಕನಿಗೆ ಕೃಷಿ ಜಮೀನು ಸಹಿತ ದರ್ಖಾಸು ಮತ್ತು ಮನೆ ನಿವೇಶನ ದೊರೆತಿದೆ. ಇನ್ನೊಂದೆಡೆ ಹುಡ್ಕೊ, ಆಶ್ರಯ ವಸತಿ ಯೋಜನೆ ಮಾತ್ರವಲ್ಲದೆ ಮಾಜಿ ಪ್ರಧಾನಿ ದಿವಂಗತ ರಾಜೀವ ಗಾಂಧಿ ಅವರ ಕನಸಿನ ಮೀಸಲಾತಿಯಿಂದ ಅಧಿಕಾರ ಹಂಚಿಕೆ ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡ ಸಹಿತ ಮಹಿಳಾ ಸಬಲೀಕರಣ ಸಾಧ್ಯವಾಗಿದೆ ಎಂದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಪ್ರಣಾಳಿಕೆಯಲ್ಲಿ ಘೋಷಿಸಿದ ಶೇ.90ರಷ್ಟು ಭರವಸೆ ಈಡೇರಿಸಿದೆ. ರೂ 130ಕೋಟಿ ವೆಚ್ಚದಲ್ಲಿ ಇಲ್ಲಿನ ಗ್ರಾಮೀಣ ಪ್ರದೇಶ ಸಂಗಬೆಟ್ಟು ಸಹಿತ ಐದು ಕಡೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು ಪುರಸಭಾ ವ್ಯಾಪ್ತಿಯಲ್ಲಿ ರೂ 52ಕೋಟಿ ವೆಚ್ಚದಲ್ಲಿ ಸಮಗ್ರ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿದೆ. ಶೀಘ್ರವೇ ಸ್ಥಳೀಯ ಹಿರ್ಣಿ-ಕುಟ್ಟಿಕಳ-ಅಣ್ಣಳಿಕೆ ರಸ್ತೆ ಡಾಂಬರೀಕರಣಗೊಳ್ಳಲಿದೆ ಎಂದು ವಿವರಿಸಿದರು.
” ರಾಜ್ಯ ಸರ್ಕಾರವು ಅರ್ಹ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಮತ್ತು ಸ್ಟೌವ್ ನೀಡಲು ಮುಂದಾಗಿದೆ. ಈ ನಡುವೆ ಕೇಂದ್ರ ಸರ್ಕಾರವು ‘ಉಜ್ವಲ’ಯೋಜನೆಯಡಿ ನೀಡುತ್ತಿರುವ ಉಚಿತ ಅಡುಗೆ ಅನಿಲ ವಿತರಣೆ ಕಾರ್ಯಕ್ರಮದಲ್ಲಿ ಕೆಲವೊಂದು ಖಾಸಗಿ ವ್ಯಕ್ತಿಗಳು ಪಾಲ್ಗೊಂಡು ಇದೊಂದು ರಾಜಕೀಯ ಕಾರ್ಯಕ್ರಮವಾಗಿ ಪರಿವರ್ತನೆಗೊಂಡಿರುವುದು ಬೇಸರದ ಸಂಗತಿಯಾಗಿದೆ.” -ಸಚಿವ ಬಿ.ರಮಾನಾಥ ರೈ
ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪದ್ಮಶೇಖರ ಜೈನ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಮಂಜುಳಾ ಸದಾನಂದ, ಮಲ್ಲಿಕಾ ಶೆಟ್ಟಿ ಅಮ್ಟಾಡಿ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಎಪಿಎಂಸಿ ಸದಸ್ಯ ಎಂ.ಪದ್ಮರಾಜ ಬಲ್ಲಾಳ್, ಪುರಸಭಾ ಸದಸ್ಯ ವಾಸು ಪೂಜಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವಪ್ಪ ಕರ್ಕೇರ, ಮಾಜಿ ಅಧ್ಯಕ್ಷ ಎ.ರಾಮಣ್ಣ ರೈ, ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಮುಖ್ಯಶಿಕ್ಷಕ ಸುಧೀರ್ ಜಿ., ಪಿಡಿಒ ವೆಂಕಟೇಶ, ಪ್ರಮುಖರಾದ ಕೆ.ಪಿ.ಲೋಬೊ, ಕೆ.ಅನಂತ ರಾವ್ ಮತ್ತಿತರರು ಇದ್ದರು.
ಕಂದಾಯ ನಿರೀಕ್ಷಕ ನವೀನ್ ಕುಮಾರ್ ಸ್ವಾಗತಿಸಿ, ವಂದಿಸಿದರು. ಗೇರು ಅಭಿವೃದ್ಧಿ ನಿಗಮ ಸದಸ್ಯ ಜಗದೀಶ ಕೊಯಿಲ ಕಾರ್ಯಕ್ರಮ ನಿರೂಪಿಸಿದರು.
