ಬೆಂಗಳೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಂಬಂಧಿಗಳ ನಿವಾಸದ ಮೇಲೆ ದಾಳಿ ಸಂಬಂಧ ಆದಾಯ ತೆರಿಗೆ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದು, ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸಬೇಕೆಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ.
ಈ ಸಂಬಂಧ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಒಳಾಡಳಿತ) ಸುಭಾಷ್ ಚಂದ್ರ ಕೇಂದ್ರದ ಕಂದಾಯ ಇಲಾಖೆ ಕಾರ್ಯದರ್ಶಿ ಹಸ್ಮುಖ್ ಅಧಿಕಾರಿಗೆ ಪತ್ರ ಬರೆದಿದ್ದು, ಸಚಿವರ ಮೇಲೆ ನಡೆಸಿರುವ ದಾಳಿ ಶಿಷ್ಟಾಚಾರ ಉಲ್ಲಂಘನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆರಾಜ್ಯದಲ್ಲಿ ಯಾವುದೇ ಅಧಿಕಾರಿ, ಸಚಿವರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳ ಮೇಲೆ ದಾಳಿ ನಡೆಸುವ ವೇಳೆ ಕನಿಷ್ಠ ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು. ನಿನ್ನೆ ಐಟಿ ಅಧಿಕಾರಿಗಳು ದಿಢೀರನೇ ನಡೆಸಿದ ದಾಳಿ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಸುಭಾಷ್ಚಂದ್ರ ದೂರಿದ್ದಾರೆ.ಐಟಿ ಅಧಿಕಾರಿಗಳು ದಾಳಿ ನಡೆಸುವ ವೇಳೆ ಸರ್ಕಾರಕ್ಕೆ ಮಾಹಿತಿ ನೀಡದಿದ್ದರೂ ಕಡೆ ಪಕ್ಷ ಪೊಲೀಸ್ ಇಲಾಖೆಗಾದರೂ ನೀಡಬೇಕಿತ್ತು. ಇದ್ಯಾವುದೂ ಇಲ್ಲದೆ ಶಸ್ತ್ರ ಸಜ್ಜಿತ ಸಿಆರ್ಪಿಎಫ್ ಯೋಧರ ಮೂಲಕ ದಾಳಿ ನಡೆಸುವ ಅಗತ್ಯವಾದರೂ ಏನಿತ್ತು ಎಂದು ಪತ್ರದಲ್ಲಿ ಪ್ರಶ್ನಿಸಿದ್ದಾರೆ.ಈ ಹಿಂದೆ ದಾಳಿ ನಡೆದ ವೇಳೆ ಸಂಬಂಧಪಟ್ಟವರಿಗೆ ಮಾಹಿತಿ ನೀಡುವ ಸಂಪ್ರದಾಯವಿತ್ತು. ಆದರೆ, ಈಗ ಐಟಿ ಅಧಿಕಾರಿಗಳು ಅತ್ಯಂತ ಗೌಪ್ಯವಾಗಿ ದಾಳಿ ನಡೆಸಿದ್ದಾರೆ. ಕರ್ನಾಟಕದ ಪೊಲೀಸರ ಬಗ್ಗೆ ಕೇಂದ್ರಕ್ಕೆ ಯಾವುದಾದರೂ ದುರುದ್ದೇಶವಿತ್ತೇ ಎಂದು ಪ್ರಶ್ನೆಸಿದ್ದಾರೆ.
