ಬಂಟ್ವಾಳ:ಯಕ್ಷಗಾನದ ಹಿರಿಯ ಕಲಾವಿದ,ಬೆಳ್ತಂಗಡಿ ತಾಲೂಕಿನ ನಾವೂರ ನಿವಾಸಿ ಗಂಗಾಧರ ಶೆಟ್ಟಿ(48) ಅವರು ಜು.31 ರಂದು ವಾಮದಪದವಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ತೆಂಕು ತಿಟ್ಟಿನ ರಾಜವೇಷಧಾರಿಯಾಗಿ ಶ್ರೀ ಬಪ್ಪನಾಡು ಮೇಳದ ಹಿರಿಯ ಕಲಾವಿದರಾಗಿದ್ದ ಅವರು ಚಿಕ್ಕಮೇಳದ ತಿರುಗಾಟದಲ್ಲೂ ಪಾಲ್ಗೊಳ್ಳುತ್ತಿದ್ದರು.ಕಳೆದ ಎರಡು ತಿಂಗಳಿನಿಂದ ಬಂಟ್ವಾಳ ತಾಲೂಕಿನ ವಾಮದಪದವು ಪರಿಸರದಲ್ಲಿ ಚಿಕ್ಕ ಮೇಳದ ತಂಡದ ತಿರುಗಾಟದಲ್ಲಿ ತೊಡಗಿಸಿಕೊಂಡಿದ್ದರು.ಕಳೆದ ಹದಿನೈದು ದಿನಗಳ ರಜೆಯಲ್ಲಿದ್ದ ಅವರು ಸೋಮವಾರ ಬೆಳಗ್ಗೆ ತಂಡವನ್ನು ಸೇರಿಕೊಂಡಿದ್ದರು,ಅವರ ಚಿಕ್ಕ ಮೇಳ ತಂಡ ವಾಮದಪದವಿನ ಬಸ್ತಿಕೋಡಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯವಿದ್ದು ,ಅವರ ಸಹಕಲಾವಿದರು ಪರಿಸರದಲ್ಲಿ ತಿರುಗಾಟದ ಆಮಂತ್ರಣ ಪತ್ರ ಹಂಚಲೆಂದು ತೆರಳಿದ್ದರು.ಮಧ್ಯಾಹ್ನದ ಹೊತ್ತಿಗೆ ಸಹಕಲಾವಿದರು ವಾಪಾಸು ಬಂದಾಗ ಗಂಗಾಧರ ಶೆಟ್ಟಿ ಅವರು ಸ್ನಾನಗೃಹದಲ್ಲಿ ಕುಸಿದು ಬಿದ್ದಿರುವುದು ಕಂಡು ಬಂತು.ತತ್‍ಕ್ಷಣ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆ ತರಲಾಯಿತು.ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಅದಾಗಲೇ ಗಂಗಾಧರ ಶೆಟ್ಟಿ ಅವರು ಕೊನೆಯುಸಿರೆಳೆದಿದ್ದಾರೆಂದು ಘೋಷಿಸಿದರು.
ಮೃತರು ಪತ್ನಿ,ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ನೇತ್ರದಾನ : ಇನ್ನೊಬ್ಬರ ಬಾಳಿಗೆ ಕಣ್ಣಾಗುವ ನಿಟ್ಟಿನಲ್ಲಿ ಕಲಾವಿದ ಗಂಗಾಧರ ಶೆಟ್ಟಿ ಅವರು ಪರಂಗಿಪೇಟೆ ಸೇವಾಂಜಲಿ ಪ್ರತಿಷ್ಟಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಅವರ ಸಹಕಾರದಲ್ಲಿ ಮಂಗಳೂರಿನ ದೇರಳಕಟ್ಟೆ ನಿಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ.ಅವರ ಕುಟುಂಬಸ್ಥರ ಉಪಸ್ಥಿತಿಯಲ್ಲಿ ಈ ಪ್ರಕ್ರಿಯೆ ನಡೆಯಿತು.
23 ವರ್ಷಗಳಿಂದ ತಿರುಗಾಟ:ನಾವೂರ ನಿರ್‍ಂಬಿ ಕೃಷ್ಣ ಶೆಟ್ಟಿ-ಲಕ್ಷ್ಮಿ ದಂಪತಿಯ ಪುತ್ರರಾದ ಗಂಗಾಧರ ಶೆಟ್ಟಿ ಅವರು ಪ್ರಾಥಮಿಕ ಶಾಲಾ ವಿದ್ಯಾಭ್ಯಾಸದ ಬಳಿಕ ಧರ್ಮಸ್ಥಳ ಲಲಿತ ಕಲಾಕೇಂದ್ರದಲ್ಲಿ ಕರ್ಗಲ್ಲು ವಿಶ್ವೇಶ್ವರ ಭಟ್ ಹಾಗೂ ಸೂರಿಕುಮೇರು ಗೋವಿಂದ ಭಟ್ ಅವರಿಂದ ಯಕ್ಷಗಾನ ತರಬೇತಿ ಪಡೆದಿದ್ದರು.ಕದ್ರಿ,ಬಪ್ಪನಾಡು,ಅರುವ,ಕರ್ನಾಟಕ,ಮಂಗಳಾದೆವಿ,ಪುತ್ತೂರು,ಕುಂಟಾರು ಹಾಗೂ ಬಪ್ಪನಾಡು ಮೊದಲಾದ ಮೇಳಗಳಲ್ಲಿ 23 ವರ್ಷಗಳ ಕಾಲ ತಿರುಗಾಟ ಅವರು ರಾಜವೇಷದಲ್ಲೇ ಪ್ರಸಿದ್ಧರಾಗಿದ್ದರು.ಕೋಟಿ -ಚೆನ್ನಯ ಪ್ರಸಂಗದ ಕೋಟಿ,ಪೆರುಮಳ ಬಲ್ಲಾಳ,ದೇವೇಂದ್ರ,ದಾರುಕಾಸುರ,ವಿಷ್ಣು,ಮಧು ಮತ್ತಿತರ ಪಾತ್ರಗಳಿಗೆ ಅವರು ಜೀವ ತುಂಬುತ್ತಿದ್ದರು.ಕಳೆದ ಐದು ವರ್ಷಗಳಿಂದ ಬಪ್ಪನಾಡು ಮೇಳದಲ್ಲಿ ವೃತ್ತಿಪರ ಕಲಾವಿದರಾಗಿದ್ದರು.
ಗಂಗಾಧರ ಶೆಟ್ಟಿ ಅವರ ನಿಧನ ವಾರ್ತೆ ತಿಳಿಯುತ್ತಿದ್ದಂತೆ ಯಕ್ಷಗಾನ ಕಲಾಭಿಮಾನಿಗಳು ಸೇರಿದಂತೆ ಬಪ್ಪನಾಡು ಮೇಳದ ಸಂಚಾಲಕ ಸತ್ಯಪಾಲ ರೈ ಕಡೆಂಜ,ವ್ಯವಸ್ಥಾಪಕ ವಿನೋದ್ ಬಜ್ಪೆ ,ಹಿರಿಯ ಯಕ್ಷಗಾನ ಕಲಾವಿದ ಅಶೋಕ ಶೆಟ್ಟಿ ಸರಪಾಡಿ,ಜಿ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್,ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್,ಚೆನ್ನೈತ್ತೋಡಿ ಗ್ರಾ.ಪಂ.ಸದಸ್ಯ ಉದಯ ಕುಮಾರ್ ಶೆಟ್ಟಿ ಮೊದಲಾದವರು ಅವರು ಆಸ್ಪತ್ರೆಗೆ ಆಗಮಿಸಿ ಮುಂದಿನ ಪ್ರಕ್ರಿಯೆಗೆ ಸಹಕರಿಸಿದರು.
