ಬಂಟ್ವಾಳ: ಹಾಸನ ಜಿಲ್ಲೆಯ ಸಕಲೇಶಪುರದ ಬಾಳುಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ವಿದ್ಯಾರ್ಥಿಗಳು ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ಭೇಟಿ ನೀಡಿದರು. ಪ್ರಕಾಶ್ ಅಂಚನ್ ನೇತೃತ್ವದಲ್ಲಿ ದುರ್ಗಾ ಫ್ರೆಂಡ್ಸ್ ಕ್ಲಬ್‍ನ ಕಾರ್ಯ ಹಾಗೂ ಶಾಲೆಯ ಒಟ್ಟು ಅಭಿವೃದ್ದಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಸಕಲೇಶಪುರದಲ್ಲೂ ಪ್ರಕಾಶ್ ಅಂಚನ್ ಮಾರ್ಗದರ್ಶನದಲ್ಲಿ ಸರಕಾರಿ ಶಾಲೆ ಉಳಿಸುವ ಹೋರಾಟ ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಕಲೇಶಪುರ ತಾ.ಪಂ.ಉಪಾಧ್ಯಕ್ಷ ಆರ್. ಮಂಜುನಾಥ್ ಮಾತನಾಡಿ ಶಾಲೆಯ ನಾಲ್ಕು ಕೋಣೆಯ ಮಧ್ಯೆ ದೇಶ ಕಟ್ಟುವ ಕಾರ್ಯ ನಡೆಸಲು ಸಾಧ್ಯವಿದೆ. ವಿದ್ಯಾರ್ಥಿಗಳು ಉತ್ತಮ ವಿದ್ಯೆ ಪಡೆದು ಭವಿಷ್ಯದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕಾಗಿದೆ ಎಂದರು. ಪರಿಸರ ರಕ್ಷಿಸುವ ಕಾರ್ಯದಲ್ಲಿ ವಿದ್ಯಾರ್ಥಿಗಳ ಪಾತ್ರವೂ ಇದೆ. ನಾವು ನಿತ್ಯ ಉಪಯೋಗಿಸುವ ಕಾಗದದ ತಯಾರಿಕೆಗೆ ಸಾಕಷ್ಟು ಮರದ ಅಗತ್ಯತೆ ಇರುವುದರಿಂದ ಕಾಗದವನ್ನು ಹೆಚ್ಚು ವ್ಯಯ ಮಾಡದೆ ಅಗತ್ಯಕ್ಕೆ ತಕ್ಕಂತೆ ಮಿತವಾಗಿ ಬಳಸಿಕೊಳ್ಳಬೇಕು ಎಂದರು. 
ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಅಂತರಾಷ್ಟ್ರೀಯ ಕಾಫಿ ಬೆಳಗಾರರ ಸಂಘದ ನಿರ್ದೇಶಕ ಜಗನ್ನಾಥ್ ಮಾತನಾಡಿ ಪ್ರಕಾಶ್ ಅಂಚನ್ ಅವರ ಸಾಧನೆ ಎಲ್ಲರಿಗೂ ಮಾದರಿ. ಇಂತಜ ಸಮಾಜಮುಖಿ ಕಾರ್ಯಗಳು ನಿರಂತರವಗಿ ನಡೆಯಲಿ ಎಂದು ಹಾರೈಸಿದರು. ಧರ್ಮಪ್ರಕಾಶ್, ಬಿ.ಎ.ರಾಜು ಮತ್ತಿತರರು ಹಾಜರಿದ್ದರು. ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ರಾಮಚಂದ್ರ ಪೂಜಾರಿ ಕರೆಂಕಿ, ನಿಕಟಪೂರ್ವಾಧ್ಯಕ್ಷ ಪೂವಪ್ಪ ಮೆಂಡನ್, ಶಾಲಾ ಮುಖ್ಯೋಪಾಧ್ಯಾಯ ಮೌರೀಸ್ ಡಿಸೋಜಾ ಮತ್ತಿತರರರು ವೇದಿಯಲ್ಲಿದ್ದರು. ದುರ್ಗಾ ಫ್ರೆಂಡ್ಸ್ ಕ್ಲಬ್ ವತಿಯಿಂದ ಶಾಲೆಗೆ ಧ್ವನಿ ವರ್ಧಕವನ್ನು ಕೊಡುಗೆಯಾಗಿ ನೀಡಲಾಯಿತು. ಬಳಿಕ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಲಾಯಿತು.
