ಬಂಟ್ವಾಳ: ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಸಂಪರ್ಕಿಸುವ ಸರ್ವಿಸ್ ರಸ್ತೆ ಬಳಿ ಮಂಗಳವಾರ ರಾತ್ರಿ ಉದಯ ಲಾಂಡ್ರಿ ಮಾಲೀಕ ತನಿಯಪ್ಪ ಮಡಿವಾಳ ಇವರ ಪುತ್ರ ಆರ್ಎಸ್ಎಸ್ ಕಾರ್ಯಕರ್ತ ಶರತ್ ಕುಮಾರ್ (30) ಇವರಿಗೆ ದುಷ್ಕರ್ಮಿಗಳು ತಲವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ಬುಧವಾರ ಮತ್ತೆ ಉದ್ವಿಗ್ನತೆ ಆವರಿಸಿಕೊಂಡಿದೆ.

ಬಿ.ಸಿ.ರೋಡ್ನಲ್ಲಿ ಕಳೆದ 40 ವರ್ಷಗಳಿಂದ ಇಲ್ಲಿನ ಸಜಿಪಮುನ್ನೂರು ಗ್ರಾಮದ ಕಂದೂರು ನಿವಾಸಿ, ಕೃಷಿಕ ತನಿಯಪ್ಪ ಮಡಿವಾಳ ಅವರು ಯಶಸ್ವಿಯಾಗಿ ಉದಯ ಲಾಂಡ್ರಿ ಉದ್ಯಮ ನಡೆಸುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ತನ್ನ ಅನಾರೋಗ್ಯ ಹಿನ್ನೆಲೆಯಲ್ಲಿ ಮನೆಯಲ್ಲಿ ಕೃಷಿ ಚಟುವಟಿಕೆ ನೋಡಿಕೊಂಡಿಡ್ಡ ಅವಿವಾಹಿತ ಪುತ್ರ ಶರತ್ ಕುಮಾರ್ಗೆ ಲಾಂಡ್ರಿ ಜವಾಬ್ದಾರಿ ವಹಿಸಿ ಕೊಟ್ಟಿದ್ದರು ಎನ್ನಲಾಗಿದೆ. ಕೇವಲ ಆರ್ಎಸ್ಎಸ್ ಪಥಸಂಚಲನ ಮತ್ತಿತರ ಕಾರ್ಯಕ್ರಮಗಳಲ್ಲಿ ಮಾತ್ರ ಭಾಗವಹಿಸುತ್ತಿದ್ದ ತೀರಾ ಸೌಮ್ಯ ಸ್ವಭಾವದ ಶರತ್ ಕುಮಾರ್ ಎಲ್ಲರೊಂದಿಗೂ ಅನ್ಯೋನ್ಯತೆ ಹೊಂದಿದ್ದರು.
ಇದರಿಂದಾಗಿ ಇವರ ಲಾಂಡ್ರಿ ಪಕ್ಕದಲ್ಲಿರುವ ಒಟ್ಟು ನಾಲ್ಕು ಅಂಗಡಿಗಳ ಪೈಕಿ ಸಿಹಿತಿಂಡಿ ಅಂಗಡಿ ಮಾಲೀಕ ಪ್ರವೀಣ, ವಸ್ತ್ರ ಅಂಗಡಿ ಮಾಲೀಕ ರಾಜಸ್ಥಾನ ಮೂಲದ ರಾಜೇಶ ಸಿಂಗ್ ಮತ್ತು ಹಣ್ಣಿನ ವ್ಯಾಪಾರಿ ಅಬ್ದುಲ್ ರವೂಫ್ ಪರಸ್ಪರ ಸ್ನೇಹಿತರಾಗಿದ್ದು ಎಲ್ಲರೂ ಪ್ರತಿದಿನ ರಾತ್ರಿ 9.30 ಅಂಗಡಿ ಮುಚ್ಚುತ್ತಾರೆ. ಮಂಗಳವಾರ ಮಾತ್ರ ವಸ್ತ್ರ ಮಳಿಗೆ ರಾತ್ರಿ 8.30ಕ್ಕೆ ಮುಚ್ಚಿ ಮನೆಗೆ ಹೋಗಿದ್ದರು. ಈ ನಡುವೆ ಇಲ್ಲಿನ ಹೊಂಡಮಯ ಸರ್ವಿಸ್ ರಸ್ತೆಯಲ್ಲಿ ವಾಹನ ಗುಂಡಿಗೆ ಬಿದ್ದ ಹಾಗೆ ಶಬ್ದ ಕೇಳಿದ ತಕ್ಷಣವೇ ಪ್ರವೀಣ ಅವರು ಲಾಂಡ್ರಿ ಕಡೆಗೆ ಬರುತ್ತಿದ್ದಂತೆಯೇ ಒಬ್ಬ ಆರೋಪಿ ಲಾಂಡ್ರಿಯಿಂದ ಎದುರಿನ ಮೇಲ್ಸೇತುವೆ ಕಡೆಗೆ ತಿರುಗಿ ನಿಂತಿದ್ದ ಬೈಕಿನ ಕಡೆಗೆ ಗ್ರಾಹಕನಂತೆ ವೇಗವಾಗಿ ಹೋಗಿ ಬಳಿಕ ಒಟ್ಟು ಮೂವರು ಪರಾರಿಯಾಗುತ್ತಿರುವುದು ಕಂಡಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣವೇ ಲಾಂಡ್ರಿಗೆ ಬಂದು ಶರತ್ ಅವರನ್ನು ಕರೆಯುವಾಗ ಬಟ್ಟೆಯ ರಾಶಿ ನಡುವೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಸ್ಥಳೀಯ ಹಣ್ಣಿನ ವ್ಯಾಪಾರಿ ಅಬ್ದುಲ್ ರವೂಫ್ ಅವರ ರಿಕ್ಷಾದಲ್ಲಿ ತುಂಬೆ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಕೊಂಡೊಯ್ದು ಬಳಿಕ ಅಲ್ಲಿನ ಆಂಬುಲೆನ್ಸ್ ಮೂಲಕ ಮಂಗಳೂರಿನ ಎ.ಜೆ.ಆಸ್ಪತ್ರೆಗೆ ತ್ವರಿತವಾಗಿ ಸಾಗಿಸಿದ್ದಾರೆ.
ಇದೀಗ ತಲೆ ಹಿಂಬದಿ, ಬೆನ್ನು, ಕೆನ್ನೆ, ಕೊರಳು ಮತ್ತಿತರ ಕಡೆಗೆ ತಲವಾರು ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ಶರತ್ ಕುಮಾರ್ ಅವರಿಗೆ ರಕ್ತದೊತ್ತಡ ಇಳಿಮುಖವಾಗಿದ್ದು, ಕಿಡ್ನಿ ಸಮಸ್ಯೆಯೂ ಕಾಣಿಸಿಕೊಂಡಿದೆ. ಈಗಾಗಲೇ 16 ಬಾಟಲು ರಕ್ತ ನೀಡಲಾಗಿದ್ದು, ಜೀವನ್ಮರಣ ಸ್ಥಿತಿಯಿಂದ ಗುರುವಾರ ಚೇತರಿಕೆ ಕಂಡು ಬರಬಹುದು ಎಂದು ವೈದ್ಯರು ಭರವಸೆ ನೀಡಿದ್ದಾರೆ ಎಂದು ಗಾಯಾಳು ಸಂಬಂಧಿಕರು ತಿಳಿಸಿದ್ದಾರೆ.
ಬಂದೋಬಸ್ತು: ಐಜಿಪಿ ಹರಿಶೇಖರನ್, ಎಸ್ಪಿ ಸುಧೀರ್ ಕುಮಾರ್ ರೆಡ್ಡಿ, ಹೆಚ್ಚುವರಿ ಎಸ್ಪಿ ಎನ್.ವಿಷ್ಣುವರ್ಧನ್, ಡಿವೈಎಸ್ಪಿ ಸಿ.ಆರ್.ರವೀಶ್ ಮತ್ತಿತರರು ಧಾವಿಸಿ ಬಂದು ತನಿಕೆಗೆ ಮಾರ್ಗದರ್ಶನ ನೀಡಿದ್ದಾರೆ ಎಂದು ನಗರ ಠಾಣಾಧಿಕಾರಿ ಎ.ಕೆ.ರಕ್ಷಿತ್ ಗೌಡ ತಿಳಿಸಿದ್ದಾರೆ.
ಜು.1ರಂದು ಬಂಟ್ವಾಳದ ಬ್ರಹ್ಮರಕೂಟ್ಲುವಿನಲ್ಲಿ ನಡೆದ ಸಾರ್ವಜನಿಕ ಶಾಂತಿ ಸಭೆಯಲ್ಲಿ ಐಜಿಪಿ ಹರಿಶೇಖರನ್ ಮಾತನಾಡಿ, ಕ್ರಿಮಿನಲ್ ಮತ್ತು ರೌಡಿಗಳನ್ನು ಮಟ್ಟ ಹಾಕಿ ಜಿಲ್ಲೆಯಲ್ಲಿ ಶಾಶ್ವತವಾಗಿ ಶಾಂತಿ ಮರು ಸ್ಥಾಪಿಸುವುದಾಗಿ ಗುಡುಗಿದ್ದರು. ಇನ್ನೊಂದೆಡೆ ತಾಲ್ಲೂಕಿನಲ್ಲಿ ನಿಷೇಧಾಜ್ಞೆ ನಡುವೆಯೂ ಇಂತಹ ದುಷ್ಕøತ್ಯ ಮುಂದುವರಿದಿರುವುದು ಇಲ್ಲಿನ ಪೊಲೀಸರು ಮತ್ತು ನಾಗರಿಕರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯ ವಿವಿಧೆಡೆಯಿಂದ ಇನ್ಸ್ಪೆಕ್ಟರ್ ಮತ್ತು ಠಾಣಾಧಿಕಾರಿಗಳ ತಂಡವನ್ನು ಮತ್ತೆ ಕರೆಸಲಾಗಿದ್ದು, ಹೊರ ಜಿಲ್ಲೆಯಿಂದ ಹೆಚ್ಚುವರಿ ಪೊಲೀಸರನ್ನು ಕೂಡಾ ಕರೆಸಿ ಮತ್ತೆ ಸೂಕ್ಷ್ಮ ಪ್ರದೇಶಗಳಲ್ಲಿ ಸರ್ಪಗಾವಲು ಹಾಕಲಾಗಿದೆ.
ಪ್ರತಿಭಟನೆ ಎಚ್ಚರಿಕೆ:
ತಾಲ್ಲೂಕಿನಲ್ಲಿ ಪೊಲೀಸರ ಬಿಗು ಬಂದೋಬಸ್ತ್ ನಡುವೆಯೇ ದುಷ್ಕರ್ಮಿಗಳು ಆರ್ಎಸ್ಎಸ್ ಕಾರ್ಯಕರ್ತ ಶರತ್ ಕುಮಾರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಬಂಟ್ವಾಳ ತಾಲ್ಲೂಕು ಮಡಿವಾಳ ಸಮಾಜ ಸೇವಾ ಸಂಘ, ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಹಾಗೂ ವಿವಿಧ ಸಂಘಟನೆ ಮುಖಂಡರು ಕೃತ್ಯವನ್ನು ಖಂಡಿಸಿದ್ದಾರೆ.
ತಾಲ್ಲೂಕಿನ ಹಿಂದೂ ಹಿತ ರಕ್ಷಣಾ ವೇದಿಕೆ ವತಿಯಿಂದ ಇದೇ 7ರಂದು ಬಿ.ಸಿ.ರೋಡ್ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದೆ.
