ಬಂಟ್ವಾಳ: ಬಂಟ್ವಾಳ, ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕಿನಾದ್ಯಂತ ಜುಲೈ 2 ರವರೆಗೆ ವಿಧಿಸಲಾಗಿದ್ದ ಸೆಕ್ಷನ್ 144 ರ ಅನ್ವಯ ನಿಷೇಧಾಜ್ಞೆಯನ್ನು ಜುಲೈ 4 ರ ಮಧ್ಯರಾತ್ರಿವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ ಆದೇಶ ಹೊರಡಿಸಿದ್ದಾರೆ.
ಶನಿವಾರ ಬೆಳಗ್ಗೆ ಜಿಲ್ಲಾಧಿಕಾರಿ, ಪಶ್ಚಿಮ ವಲಯ ಐಜಿಪಿ, ಎಸ್ಪಿ ಸಹಿತ ಉನ್ನತ ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಪೊಲೀಸ್ ಇಲಾಖೆ ವತಿಯಿಂದ ಬಂಟ್ವಾಳ ತಾಲೂಕು ಮಟ್ಟದ ಶಾಂತಿಸಭೆ ನಡೆದಿತ್ತು. ಸಂಜೆಯಾಗುತ್ತಲೇ ನಿಷೇಧಾಜ್ಞೆ ವಿಸ್ತರಣೆ ಕುತೂಹಲಕ್ಕೆ ಕಾರಣವಾಗಿದೆ.
ಶಾಂತಿಸಭೆಯಲ್ಲಿ ಐಜಿಪಿ ಹರಿಶೇಖರನ್ ಮತ್ತು ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ್ ಪೊಲೀಸ್ ಇಲಾಖೆಯ ಕಟ್ಟುನಿಟ್ಟಿನ ಕ್ರಮಗಳನ್ನು ಘೋಷಿಸಿ, ಹಲವು ಕ್ರಮಗಳ ಕುರಿತು ವಿವರ ನೀಡಿದ್ದರು. ಇದಾದ ಬಳಿಕ ಪರಿಸ್ಥಿತಿ ಮೊದಲಿನಂತಾಗಬಹುದು ಎಂಬ ವಿಶ್ವಾಸ ಮೂಡಿತ್ತು.
ಕಲ್ಲಡ್ಕದಲ್ಲೂ ಯಾವುದೇ ಆತಂಕದ ಸ್ಥಿತಿ ಇಲ್ಲ. ಬಂಟ್ವಾಳ ತಾಲೂಕಿನಲ್ಲಿ ಶಾಂತಿ, ಸುವ್ಯವಸ್ಥೆ ನೆಲಸಿದೆ. ಉಳಿದ ತಾಲೂಕುಗಳಲ್ಲೂ ಯಾವುದೇ ಆತಂಕದ ಸ್ಥಿತಿ ಇಲ್ಲ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗರೂಕತಾ ಕ್ರಮವಾಗಿ ನಿಷೇಧಾಜ್ಞೆ ವಿಸ್ತರಣೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಪದೇ ಪದೇ ನಿಷೇಧಾಜ್ಞೆ ವಿಸ್ತರಣೆ ಆಗುತ್ತಿರುವ ಸುದ್ದಿಯೇ ಜನರಲ್ಲಿ ಆತಂಕವನ್ನು ಸೃಷ್ಟಿಸುತ್ತಿವೆ.
