ಸುದ್ದಿ9ಮೂಡುಬಿದರೆ: ಯಕ್ಷಗಾನ ತಾಳಮದ್ದಳೆಯ ಅರ್ಥಗಾರಿಕೆಯಲ್ಲಿ ನುಡಿ-ನಡೆ ಮುಖ್ಯ. ಇದನ್ನು ಕಲಾವಿದ ಅರ್ಥ ಮಾಡಿಕೊಂಡಾಗ ಪ್ರದರ್ಶನ ಮತ್ತು ಕಲೆಗೂ ಗೌರವ ದೊರೆಯುತ್ತದೆ ಎಂದು ಖ್ಯಾತ ಅರ್ಥಧಾರಿ ವಿಟ್ಲ ಶಂಭು ಶರ್ಮ ಹೇಳಿದರು.
ಅವರು ಇಲ್ಲಿನ ಯಕ್ಷ ಸಂಗಮ ಮೂಡುಬಿದರೆ: ವತಿಯಿಂದ ಶನಿವಾರ ರಾತ್ರಿ ಖ್ಯಾತ ಕಲಾವಿದರುಗಳ ಕೂಡುವಿಕೆಯಿಂದ ನಡೆದ 15ನೇ ವರ್ಷದ ತಾಳಮದ್ದಳೆ ಕೂಟದ ಪ್ರಯುಕ್ತ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು.
ಸಿದ್ಧಕಟ್ಟೆ ಚೆನ್ನಪ್ಪಶೆಟ್ಟಿ ವೇದಿಕೆಯಲ್ಲಿ ನಡೆದ ಸಮ್ಮಾನ ಕಾರ್ಯಕ್ರಮದಲ್ಲಿ ಕಲಾವಿದ ಶಂಭು ಶರ್ಮರಿಗೆ ಯಕ್ಷರಾಜ ಮತ್ತು ಗಣೇಶ್ ಕೊಲೆಕಾಡಿ ಅವರಿಗೆ ಛಂದೋ ರತ್ನ ಬಿರುದು ನೀಡಿ ಗೌರವಿಸಲಾಯಿತು.
ದ.ಕ ಜಿಲ್ಲಾ ಬಿ.ಜೆ.ಪಿ ಅಧ್ಯಕ್ಷ ಪ್ರತಾಪ್ ಸಿಂಹ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಲಾಪದಲ್ಲಿ ಸಚಿವ ಕೆ. ಅಭಯಚಂದ್ರ ಜೈನ್ ತಾಳಮದ್ದಳೆ ಕೂಟವನ್ನು ಉದ್ಘಾಟಿಸಿದರು.
ಕಲಾವಿದರಾದ ಸುಣ್ಣಂಬಳ ವಿಶ್ವೇಶ್ವರ ಭಟ್, ವಾದಿರಾಜ ಕಲ್ಲೂರಾಯ ಅಭಿನಂದನಾ ಮಾತುಗಳನ್ನಾಡಿದರು.
ಉದ್ಯಮಿ ಕೆ. ಶ್ರೀಪತಿ ಭಟ್, ಪದ್ಮರಾಜ್, ದಿವಾಕರ ಶೆಟ್ಟಿ, ಎಂ.ಜೆ.ರಾವ್ ಶಿಮಂತೂರು ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು. ಯಕ್ಷಸಂಗಮದ ಸಂಚಾಲಕ ಶಾಂತಾರಾಮ ಕುಡ್ವ ಸ್ವಾಗತಿಸಿದರು. ಸುದರ್ಶನ ಎಂ ಕಾರ್ಯಕ್ರಮ ನಿರ್ವಹಿಸಿ ವಿನಾಯಕ್ ಭಟ್ ವಂದಿಸಿದರು.
ಬಳಿಕ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಅತಿಕಾಯ-ಚಂದ್ರಹಾಸ ತಾಳಮದ್ದಳೆ ನಡೆಯಿತು.

