ಬಂಟ್ವಾಳ: ಸಣ್ಣ ಮಳೆ ಬಂದರೆ ತಗ್ಗುಪ್ರದೇಶಗಳು ಮುಳುಗುವುದು ಹೇಗೆ ಎಂಬುದಕ್ಕೆ ಹಲವಾರು ಉದಾಹರಣೆಗಳು ಇವೆ. ಆದರೆ ನೀರು ಹರಿಯಲು ಸೂಕ್ತ ವ್ಯವಸ್ಥೆ ಇಲ್ಲದಿದ್ದರೆ ಏನಾಗುತ್ತದೆ ಎಂಬುದಕ್ಕೆ ಮೊನ್ನೆ ಮಂಗಳೂರು ಮಹಾನಗರದ ಹೃದಯಭಾಗದಲ್ಲಿನ ಬಲ್ಮಠ ಬಸ್ ನಿಲ್ದಾಣ ಪರಿಸರ ಸಾಕ್ಷಿಯಾಯಿತು. ಹಾಗೆಯೇ ಪ್ರತಿ ಮಳೆಗೂ ಸಮಸ್ಯೆ ಎದುರಾಗುವ ಜಾಗವೊಂದು ಬಂಟ್ವಾಳ ತಾಲೂಕು ಕೇಂದ್ರದಲ್ಲೂ ಇದೆ. ಇದು ಬಿ.ಸಿ.ರೋಡ್ ಸ್ಟೇಟ್‍ಬ್ಯಾಂಕ್ ಎದುರಿನ ಕತೆ.ವಿಶೇಷ ಎಂದರೆ ಸಣ್ಣ ಮಳೆ ಬಂದರೆ ಸಾಕು. ಇಲ್ಲಿನ ಪದ್ಮಾ ಕಾಂಪ್ಲೆಕ್ಸ್ ಮತ್ತು ಸ್ಟೇಟ್ ಬ್ಯಾಂಕ್ ಎದುರಿನ ರಸ್ತೆಯ ಅರ್ಧಭಾಗದಲ್ಲಿ ಕೆರೆಯಂತೆ ನೀರು ನಿಲ್ಲುತ್ತದೆ. ಒಂದಿಡೀ ದಿನ ಮಳೆ ಬಾರದೆ ಬಿಸಿಲು ಕಾದರೆ ನೀರು ಆವಿಯಾಗುತ್ತದೆ. ಇಲ್ಲದಿದ್ದರೆ ಮಳೆ ಬರದಿದ್ದರೂ ಕೆಸರಿನ ರಾಡಿ ಕಾಣಿಸುತ್ತದೆ.

* ಏನು ಸಮಸ್ಯೆ:
ಒಂದು ಮಳೆ ಬಂದರೆ ಇಲ್ಲಿ ನೀರು ನಿಲ್ಲುತ್ತದೆ. ರಸ್ತೆಯ ಅರ್ಧದಷ್ಟು ನೀರು ವ್ಯಾಪಿಸಿ ಕೊಳದಂತಾಗುತ್ತದೆ. ಪಾದ ಮುಳುಗುವಷ್ಟು ನೀರು ಸಣ್ಣ ಮಳೆಗೂ ಕಾಣಿಸುತ್ತದೆ. ಜೊತೆಗೆ ಕೆಸರೂ ಇರುವುದರಿಂದ ನಡೆದುಕೊಂಡು ಹೋಗುವವರು ತೊಂದರೆ ಅನುಭವಿಸುತ್ತಾರೆ. ರಸ್ತೆಯ ಅರ್ಧದವರೆಗೂ ನೀರು ನಿಲ್ಲುವ ಕಾರಣ ಟ್ರಾಫಿಕ್ ಜಾಮ್ ಗೂ ಕಾರಣವಾಗುತ್ತದೆ. ಇನ್ನೊಂದು ಭಾಗದಲ್ಲಿ ಆಟೋ ಸ್ಟಾಂಡ್, ಒಂದು ಭಾಗದಲ್ಲಿ ಟ್ಯಾಕ್ಸಿ ಸ್ಟ್ಯಾಂಡ್, ಮಧ್ಯೆ ರಸ್ತೆಯಲ್ಲಿ ಕೊಳದಂತಾದ ಸ್ಥಿತಿ ಇದ್ದರೆ ನಡೆದುಕೊಂಡು ಹೋಗಲೂ ತೊಂದರೆ.
* ಏನು ಕಾರಣ:
ನೀರು ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸದಿರುವುದು ಇದಕ್ಕೆ ಮೂಲಕಾರಣ. ರಸ್ತೆ ಡಾಂಬರು ಹಾಕುವಾಗಲೇ ನೀರು ನಿಲ್ಲುವ ಜಾಗ ತಗ್ಗು ಎಂಬುದು ಸಾಬೀತಾಗಿದೆ. ಮೇಲಿನಿಂದ ಹರಿದುಬರುವ ಮಳೆನೀರು ಮುಂದೆ ಹೋಗಲು ಜಾಗವಿಲ್ಲದೆ ಆದ ಸಮಸ್ಯೆ ಇದು.ಇಂಥದ್ದು ಹಲವಾರು ಸಿಗಬಹುದು. ಆದರೆ ಬಿ.ಸಿ.ರೋಡ್‍ನ ಪ್ರಮುಖ ಜಾಗಗಳಾದ ಉದ್ಘಾಟನೆಗೆ ಸಿದ್ಧಗೊಳ್ಳುತ್ತಿರುವ ಮಿನಿ ವಿಧಾನಸೌಧ, ಕೃಷಿ ಇಲಾಖೆ, ಶಿಕ್ಷಣಾಕಾರಿಗಳ ಕಚೇರಿ, ತೋಟಗಾರಿಕಾ ಇಲಾಖೆ, ಮೆಸ್ಕಾಂ, ತಾಲೂಕು ಕಚೇರಿ, ತಾಲೂಕು ಪಂಚಾಯತ್ ಕಚೇರಿ, ಸಚಿವರ ಕಚೇರಿ ಸಹಿತ ಪ್ರಮುಖ ಸರಕಾರಿ ಇಲಾಖೆಗಳಿಗೆ ಜನರು ಬರಬೇಕಿದ್ದರೆ ಈ ಕೃತಕ ಕೆರೆಯನ್ನು ಹಾದು ಹೋಗಬೇಕು. ನೀರು ನಿಲ್ಲುವ ಈ ಜಾಗದಲ್ಲಿ ನಡೆದಾಡಲೂ ಕಷ್ಟ. ವಾಹನ ಸವಾರರಿಗಂತೂ ಸಮಸ್ಯೆ. ಅದರಲ್ಲೂ ದ್ವಿಚಕ್ರ ವಾಹದಲ್ಲಿ ಸಾಗುವವರು ತೊಂದರೆಪಡಬೇಕು. ಇಲ್ಲೇ ಪಕ್ಕ ಟ್ಯಾಕ್ಸಿ ತಂಗುದಾಣವಿದೆ. ಟೂರಿಸ್ಟ್ ಟ್ಯಾಕ್ಸಿ ಚಾಲಕ, ಮಾಲೀಕರು ನಿತ್ಯ ನೀರು ನಿಲ್ಲುವುದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಆಡಳಿತಕ್ಕೆ ಮನವಿಯನ್ನೂ ನೀಡಿದ್ದಾರೆ.
* ಸದ್ಯದಲ್ಲೇ ಪರಿಹಾರ:
ಬಿ.ಸಿ.ರೋಡಿನ ಹೃದಯಭಾಗದಲ್ಲೇ ಉದ್ಭವವಾಗಿರುವ ಕೃತಕ ಕೆರೆ ಸಮಸ್ಯೆಗೆ ಪರಿಹಾರ ಸದ್ಯದಲ್ಲೇ ದೊರಕಲಿದೆ ಎನ್ನುತ್ತಾರೆ ಮುಖ್ಯಾಕಾರಿ ಎಂ.ಎಚ್.ಸುಧಾಕರ್. ಮಿನಿ ವಿಧಾನಸೌಧ ನಿರ್ಮಾಣ ಹಂತದಲ್ಲಿ ಈ ಭಾಗದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು ಎಂಬ ಭರವಸೆಯನ್ನು ಅವರು ನೀಡಿದ್ದಾರೆ.ಹಾಗೇನಾದರೂ ಆದರೆ ದಶಕದ ಸಮಸ್ಯೆಯೊಂದು ಬಗೆಹರಿದಂತಾದೀತು. ಇಲ್ಲವಾದರೆ ಈ ಬಾರಿ ಮುಂಗಾರು ಸಂದರ್ಭ ಬೀಜ ಬಿತ್ತನೆ ಮಾಡಲು ಗದ್ದೆ ಹುಡುಕಬೇಕಿಲ್ಲ. ಬಿ.ಸಿ.ರೋಡಿನ ಸ್ಟೇಟ್ ಬ್ಯಾಂಕ್ ಎದುರು ಬಂದರೆ ಸಾಕು!
