ಬಂಟ್ವಾಳ : ಶಿಕ್ಷಣವು ಬದುಕಿನಲ್ಲಿ ಹೊಸ ಬದಲಾವಣೆಗಳನ್ನು ತರುತ್ತದೆ. ಕೇವಲ ಶಾರೀರಿಕ ವಲ್ಲದೇ ಮಾನಸಿಕ ವಿಕಾಸಕ್ಕೆ ಹೆಚ್ಚು ಒತ್ತು ನೀಡುವ ಶಿಕ್ಷಣವು ಇಂದಿನ ಅಗತ್ಯ. ಮಗುವು ಸಕಾರಾತ್ಮಕವಾಗಿ ಬೆಳೆದಾಗ ಉತ್ತಮ ಸಮಾಜದ ಬೆಳವಣಿಗೆಯಾಗುತ್ತದೆ ಎಂದು ಜಿ.ಪಂ.ಸದಸ್ಯೆ ಮಂಜುಳಾ ಮಾಧವ ಮಾವೆಯವರು ದ.ಕ.ಜಿ.ಪಂ.ಪ್ರಾ.ಶಾಲೆ ಮಜಿ ವೀರಕಂಭ ಇಲ್ಲಿ 2017-18ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಹಾಗೂ ಪೂರ್ವ ಪ್ರಾಥಮಿಕ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ಮಗು ನಮ್ಮ ಸಂಪತ್ತು ಅದಕ್ಕೆ ಉತ್ತಮ ಆಚಾರ ವಿಚಾರಗಳನ್ನು, ಶಿಕ್ಷಣದಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಬೆಳೆಸಿಕೊಳ್ಳಲು ಅವಕಾಶ ನೀಡಬೇಡಬೇಕು, ನಮ್ಮ ನಿಲುವುಗಳನ್ನು ಮಗುವಿನ ಮೇಲೆ ಹೇರದೇ ಸ್ವತಂತ್ರವಾಗಿ ಕಲಿಯಲು ಅವಕಾಶಗಳನ್ನು ನೀಡಬೇಕು ಎಂದು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಸಂಜೀವ ಮೂಲ್ಯ ರವರು ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ತಿಳಿಸಿದರು.
ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಕಿಯರು, ಹಾಗೂ ಮಂಜುಳಾ ಮಾಧವ ಮಾವೆಯವರು ಪುಷ್ಪವೃಷ್ಟಿ ಸುರಿಸಿ ಆರತಿ ಬೆಳಗಿಸಿ ಸಿಹಿ ತಿಂಡಿನೀಡಿ ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಪಂ. ಸದಸ್ಯರಾದ ರಾಮಚಂದ್ರ ಪ್ರಭು, ಜನಾರ್ಧನ ಪೂಜಾರಿ, ವಿ.ಗ್ರಾ.ಬ್ಯಾಂಕ್ ನಿರ್ಧೇಶಕರಾದ ವಿಶ್ವನಾಥ, ಕಲ್ಲಡ್ಕ ರೈ.ಸೆ.ಸ.ಬ್ಯಾಂಕ ನಿರ್ಧೇಶಕ ಕೊರಗಪ್ಪ ನಾಯ್ಕ, ಎಸ್.ಡಿ.ಎಂ.ಸಿ. ಸದಸ್ಯರು, ಎಸ್.ಕೆ.ಪಿ.ಎ. ಸಂಘಟನಾ ಕಾರ್ಯದರ್ಶಿ ಚಿನ್ನಾ ಮೈರಾ, ಮಾತೃಶ್ರೀ ಗೆಳೆಯರ ಬಳಗದ ಅಧ್ಯಕ್ಷ ದಿನೇಶ್ ಹಾಗೂ ಪೋಷಕರು ಹಾಜರಿದ್ದರು.
ಮುಖ್ಯ ಶಿಕ್ಷಕ ನಾರಾಯಣ ಪೂಜಾರಿಯವರು ಸ್ವಾಗತಿಸಿ, ಶಿಕ್ಷಕಿ ಸಂಗೀತ ಶರ್ಮ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶಿಕ್ಷಕಿಯರಾದ ಶಕುಂತಳಾ, ಸಿಸಿಲಿಯಾ, ಜ್ಯೋತಿ ಹಾಗೂ ಜಯಲಕ್ಷ್ಮೀಯವರು ಸಹಕರಿಸಿದರು.
