ಬಂಟ್ವಾಳ: ಮತ್ತೊಬ್ಬನನ್ನೂ ಮನುಷ್ಯನೆಂದು ಪರಿಗಣಿಸಿ ಆತನನ್ನು ಪ್ರೀತಿಸುವ ಮನಸ್ಸು, ಸದ್ಭುದ್ದಿಯನ್ನು ದೇವರು ಎಲ್ಲರಿಗೂ ಕರುಣಿಸಲಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಪಾಣೆಮಂಗಳೂರು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನದಲ್ಲಿ ಶ್ರೀ ದೇವರ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ಜಾತ್ರಾ ಮಹೋತ್ಸವ ಸಂದರ್ಭ ಸೋಮವಾರ ರಾತ್ರಿ ನಡೆದ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಧರ್ಮಸ್ಥಳ ಕನ್ಯಾಡಿಯ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ದೇವರು ನಮ್ಮನ್ನು ಉತ್ತಮ ಕಾರ್ಯಗಳನ್ನು ಮಾಡಲೆಂದೇ ಮನುಷ್ಯನನ್ನಾಗಿ ನೇಮಿಸಿದ್ದಾನೆ. ಪದವಿಗಳನ್ನು ಕೊಟ್ಟಿದ್ದಾನೆ. ನಾವು ಅಹಂಕಾರ ಇಲ್ಲದೆ ತ್ಯಾಗಮಯಿಯಾಗಿ ಕೆಲಸ ಮಾಡಿದರೆ ಒಳ್ಳೆಯ ಸಂದೇಶವನ್ನು ಮತ್ತೊಬ್ಬರಿಗೆ ನೀಡಿದಂತಾಗುತ್ತದೆ ಎಂದು ಸ್ವಾಮೀಜಿ ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಅತಿ ಹೆಚ್ಚು ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ತುಳುನಾಡಿನ ಜನತೆ ಇದಕ್ಕಾಗಿ ಸರಕಾರವನ್ನು ಅವಲಂಬಿತವಾಗುವುದಿಲ್ಲ. ದೇವರ ಸೇವೆಯೆಂದು ಇಡೀ ಊರವರು ಒಟ್ಟಾಗಿ ದುಡಿಯುವುದೇ ಇಲ್ಲಿನ ವೈಶಿಷ್ಟ್ಯ ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಗುರುನರಸಿಂಹ ದೇವಳ ಆಡಳಿತ ಮೊಕ್ತೇಸರ, ಉದ್ಯಮಿ ಯಜ್ಞನಾರಾಯಣ ಹೇರಳೆ ಉಪಸ್ಥಿತರಿದ್ದರು.ವಾಸ್ತುತಜ್ಞ ಪ್ರಸಾದ ಮುನಿಯಂಗಳ, ದಾರುಶಿಲ್ಪಿ ನಾರಾಯಣ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ಎರಕಳ ರಘುನಾಥ ಸೋಮಯಾಜಿ ಸ್ವಾಗತಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯ ಏಲಬೆ ಪದ್ಮನಾಭ ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣರಾಜ ಭಟ್ ವಂದಿಸಿದರು. ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
