ಬಂಟ್ವಾಳ: ತಾಲ್ಲೂಕಿನ ನರಿಕೊಂಬು ಗ್ರಾಮದ ಪಾಣೆಮಂಗಳೂರು ನೇತ್ರಾವತಿ ನದಿ ತೀರದಲ್ಲಿ ಸುಮಾರು 700 ವರ್ಷಗಳ ಹಿನ್ನೆಲೆ ಹೊಂದಿರುವ ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನವು ರೂ 7ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡು ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವವು ಇದೇ 29ರಂದು ಸಂಭ್ರಮ ಸಡಗರದಿಂದ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಗಣಪತಿ ಸೋಮಯಾಜಿ ಹೇಳಿದ್ದಾರೆ.
ಸೋಮವಾರ ಸಂಜೆ ದೇವಳದಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಒಟ್ಟು 1.20ಎಕರೆ ಜಮೀನು ಹೊಂದಿರುವ ಕ್ಷೇತ್ರದಲ್ಲಿ ಶ್ರೀ ಭಯಂಕೇಶ್ವರ ಸದಾಶಿವ ದೇವರು ಮಾತ್ರವಲ್ಲದೆ ಶ್ರೀ ಗಣಪತಿ ಮತ್ತು ಶ್ರೀ ದುರ್ಗಾ ಸಾನಿಧ್ಯ ಹೊಂದಿದೆ. ಭಾರೀ ಅಪರೂಪ ಎಂಬಂತೆ ಇಲ್ಲಿನ ಶಿವಾಲಯವು ಪಶ್ಚಿಮಾಭಿಮುಖವಾಗಿದ್ದು ಭಕ್ತರನ್ನು ತನ್ನತ್ತ ಆಕರ್ಷಿಸುತ್ತಿದೆ.24btl-Templ

24btl-Thirthamantp
ಇದೇ 24ರಂದು ಸಂಜೆ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ಸಹಿತ ಪ್ರತಿದಿನ ಸಂಜೆ ವಿವಿಧ ವೈದಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಾಣಿಲ ಮೋಹನದಾಸ ಸ್ವಾಮೀಜಿ, ಕನ್ಯಾಡಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಎಡನೀರು ಮಠದ ಕೇಶವಾನಂದ ಭಾರತಿ ಸ್ವಾಮೀಜಿ ಮತ್ತಿತರರು ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡುವರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು, ಆರ್‍ಎಸ್‍ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಕಲ್ಲಡ್ಕ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ನೀಲೇಶ್ವರ ಪದ್ಮನಾಭ ತಂತ್ರಿ, ಪ್ರಗತಿಪರ ಕೃಷಿಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಅವರು ತಿಳಿಸಿದರು.

ಇದೇ ವೇಳೆ ವಾಸ್ತುಶಿಲ್ಪಿ ಪ್ರಸಾದ್ ಮುನಿಯಂಗಳ, ಶಿಲ್ಪಿ ರಾಜು ಎಚ್. ನಾಯ್ಕ್, ದಾರುಶಿಲ್ಪಿ ನಾರಾಯಣ ಆಚಾರ್ಯ ಕಲ್ಲಮುಂಡ್ಕೂರು ಇವರನ್ನು ಸನ್ಮಾನಿಸಲಾಗುವುದು. ಮಾತ್ರವಲ್ಲದೆ ಭಜನೆ, ದೇವರ ಉತ್ಸವ ಸಹಿತ ‘ಯಕ್ಷ ನಾಟ್ಯ ವೈಭವ’, ನೃತ್ಯ ವೈಭವ, ಭಕ್ತಿ ರಸಮಂಜರಿ, ದೇವ ಭಾವ ಸಂಗೀತ, ಲಲಿತ ಸಹಸ್ರನಾಮ ಪಾರಾಯಣ, ದಕ್ಷಾಧ್ವರ ಗಿರಿಜಾ ಕಲ್ಯಾಣ ಯಕ್ಷಗಾನ ಬಯಲಾಟ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.ಮುಂದಿನ ದಿನಗಳಲ್ಲಿ ನೇತ್ರಾವತಿ ನದಿ ತೀರದಲ್ಲಿ ಭಕ್ತರಿಗೆ ತೀರ್ಥಕೆರೆ, ಧ್ಯಾನಮಂದಿರ ಮತ್ತು ಸ್ನಾನಗೃಹ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಪ್ರಮುಖರಾದ ಬಿ.ನಾರಾಯಣ ಸೋಮಯಾಜಿ, ಪದ್ಮನಾಭ ಮಯ್ಯ, ಬಿ.ರಘು ಸಪಲ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ಯಶೋಧರ ಕರ್ಬೆಟ್ಟು, ಕೃಷ್ಣರಾಜ ಭಟ್, ಪ್ರೇಮನಾಥ ಶೆಟ್ಟಿ, ಕೇಶವ ಪಿ.ಎಚ್, ದಿವಾಕರ ಭಂಡಾರಿ, ಕಿಶೋರ್ ಶೆಟ್ಟಿ, ಪುರುಷೋತ್ತಮ ಬಂಗೇರ ನಾಟಿ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *